ಜಿಲ್ಲೆ

ಬರ ಪರಿಹಾರ ಸಾಲದ ಜಮೆಗೆ ಕ್ರಮವಹಿಸಿ

ಬಳ್ಳಾರಿ : ರಾಜ್ಯ ಸರ್ಕಾರ ರೈತರ ಖಾತೆಗಳಿಗೆ ಬರ ಪರಿಹಾರ ಹಾಗೂ ವಿವಿಧ ಯೋಜನೆಯ ಬಿಡುಗಡೆ ಮಾಡಿದ ಹಣವನ್ನು ಬ್ಯಾಂಕ್ ಸಾಲಕ್ಕೆ ಜಮೆ ಮಾಡಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಆರ್. ಮಾಧವರೆಡ್ಡಿ ಆರೋಪಿಸಿದರು. ನಗರದ ಮರ್ಚೆಡ್ ಹೋಟೆಲ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಬಹುತೇಕ ಬ್ಯಾಂಕ್‌ಗಳಲ್ಲಿ ತನ್ನಲ್ಲಿ ಸಾಲ ಪಡೆದುಕೊಂಡ ರೈತರ ಖಾತೆಗಳಿಗೆ ಸರ್ಕಾರದಿಂದ ವಿವಿಧ ರೀತಿಯಲ್ಲಿ ಬಂದಂತಂಹ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳದಂತೆ ಆಯಾ ಜಿಲ್ಲಾಧಿಕಾರಿಗಳು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕು. ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ರೈತರ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿರುವ ಬ್ಯಾಂಕ್‌ಗಳ ವಿರುದ್ದ ವಿಪತ್ತು ನಿರ್ವಹಣ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದ 22 ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಕರ್ನಾಟಕ ಬ್ಯಾಂಕ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಸುಸ್ತಿದಾರರಾಗಿರುವ ರೈತರ ಸಾಲವನ್ನು ಒಟಿಸಿ ಯೋಜನೆ ಮೂಲಕ ಬಗೆಹರಿಸಬೇಕು ಎಂದು ಬ್ಯಾಂಕ್‌ನ ಅಧ್ಯಕ್ಷರಿಗೆ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಯ ಪಿ.ಪಾರ್ಶ್ವನಾಥ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. ಆದ್ದರಿಂದ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಸಾಲ ಪಡೆದ ರೈತರಿಗೆ ರೈತಸ್ನೇಹಿ ಒಟಿಎಸ್ ಯೋಜನೆ ಯನ್ನು ದಿನಾಂಕ ನಿಗದಿಪಡಿಸಬೇಕು. ಜತೆಗೆ ಗ್ರಾಮೀಣ ಭಾಗದಲ್ಲಿ ವ್ಯಾಪಕವಾದ ಪ್ರಚಾರವನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಶ್ರೀಶೈಲ, ಆಲದಹಳ್ಳಿ ಬಸವರಾಜ, ಸ್ವಾಮಿ, ಪೊಂಪನಗೌಡ, ಸುರೇಂದ್ರ , ತಿಮ್ಮರೆಡ್ಡಿ ಇದ್ದರು.