ಜಿಲ್ಲೆ

ಬರ ಪರಿಹಾರ, ವಿಮೆ ನೀಡಲು ಆಗ್ರಹ

ಬಸವಕಲ್ಯಾಣ: ಬಸವಕಲ್ಯಾಣ ಹಾಗೂ ಹುಲಸೂರ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದು, ಶೀಘ್ರದಲ್ಲಿ ಪರಿಹಾರ ಹಣ ಬಿಡುಗಡೆ ಮಾಡಬೇಕು, ವಿಮೆ ಪರಿಹಾರ ಒದಗಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಗರದಲ್ಲಿ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳಿಂದ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪದಾಧಿಕಾರಿಗಳ ನಿಯೋಗ ಶುಕ್ರವಾರ ಮಿನಿ ವಿಧಾನ ಸೌಧಕ್ಕೆ ತೆರಳಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಶಾಂತಗೌಡ ಬಿರಾದಾರ ಮೂಲಕ ಸಲ್ಲಿಸಿತು.

ಕೇಂದ್ರ ಸರ್ಕಾರ ಕಬ್ಬಿನ ಎಫ್‌ಆರ್‌ಪಿ ದರ ನಿಗದಿಪಡಿಸಿದ್ದು, ರೈತರ ಸಭೆ ನಡೆಸಿ, ದರ ನಿಗದಿಪಡಿಸಿದ ನಂತರ ಕಾರ್ಖಾನೆ ಪ್ರಾರಂಭಿಸಬೇಕು, ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಬೇಕು, ಕಾವೇರಿ, ಕೃಷ್ಣಾ, ಗೋದಾವರಿ, ತುಂಗಭದ್ರಾ, ಕಾರಂಜಾ ನದಿ ರಾಜ್ಯಕ್ಕೆ ಸೇರಿದ್ದರಿಂದ ಅವುಗಳ ನೀರು ರಕ್ಷಿಸಿ, ರಾಜ್ಯಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡುವ ಮೂಲಕ ತಪ್ಪು ಮಾಡುತ್ತಿದೆ. ರಾಜ್ಯದ ನೆಲ, ಜಲ, ರೈತರ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಸಂಘದ ಅಧ್ಯಕ್ಷ ರುದ್ರಯ್ಯ ಸ್ವಾಮಿ, ಉಪಾಧ್ಯಕ್ಷ ಸಂತೋಷಕುಮಾರ ಗುದಗೆ, ಪ್ರಧಾನ ಕಾರ್ಯದರ್ಶಿ ಅಣವೀರ ಬಿರಾದಾರ, ಕಾಶೀನಾಥ, ಅಂಬಾರಾಯ ಅಟ್ಟೂರ, ಕಮಲಾಬಾಯಿ, ಬಸವರಾಜ ಬಂಡೆ, ಮಹೇಶ ಬಂಡೆ, ಅನೀಲ ಮರಪಳ್ಳೆ, ಶಿವಶರಣಪ್ಪ ಬೀರಬಟ್ಟೆ, ಸಿದ್ದಲಿಂಗ ಬೀರಬಟ್ಟೆ, ರಾಜಕುಮಾರ ಹೊಳ್ಳೆ ಇತರರಿದ್ದರು.