ಜಿಲ್ಲೆ

ಬರ ಪರಿಹಾರ ವಿತರಣೆಗೆ ಆಗ್ರಹ

ರಮೇಶ ಮೇಳಕುಂದಾ

ಕಲಬುರಗಿ: ರಾಜ್ಯದಲ್ಲಿ ಮಳೆ ಕೊರತೆಯಿಂದ ಬೆಳೆಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ಶೀಘ್ರ ಬರ ಪರಿಹಾರ ವಿತರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ರಾಜ್ಯ ಸರ್ಕಾರ ಬರ ನಿರ್ವವಣೆಯಲ್ಲಿ ವಿಫಲವಾಗಿದೆ. ಬರಪೀಡಿತ ಘೋಷಿಸಿದ್ದರೂ ಪರಿಹಾರ ನೀಡದೆ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದೆ. ಕೇಂದ್ರ ಸರ್ಕಾರ ಅಧ್ಯಯನ ತಂಡ ಕಳಿಸಿ ವರದಿ ಪಡೆದಿದ್ದರೂ ಪರಿಹಾರ ಘೋಷಿಸಿಲ್ಲ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ರೈತರು ಸಾಲ ಮಾಡಿದ್ದರೂ ಶೇ.೮೦ ಬೆಳೆ ಹಾಳಾಗಿದ್ದರಿಂದ ದಿಕ್ಕುತೋಚದಂತಾಗಿ ಕೆಲಸ ಅರಸಿ ಗುಳೆ ಹೋಗುತ್ತಿದ್ದಾರೆ. ದನಕರುಗಳಿಗೆ ಮೇವು, ನೀರಿನ ಕೊರತೆ ಉಂಟಾಗಿದೆ. ಆದರೂ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ದೂರಿದರು.

ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ರೈತ ವಿರೋಧಿ ಕಾನೂನು ರದ್ದುಪಡಿಸುವುದಾಗಿ ಭರವಸೆ ನೀಡಿತ್ತು. ಅಂತಲೇ ರೈತರು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದಾರೆ. ಆದರೆ ಆರು ತಿಂಗಳಾದರೂ ಮಾರಕ ಕಾನೂನು ರದ್ದುಪಡಿಸುವ ಕುರಿತು ಚಕಾರ ಎತ್ತುತ್ತಿಲ್ಲ. ಸರ್ಕಾರ ಕ್ರಮಕ್ಕೆ ಮುಂದಾಗದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರ ಪಡಿತರ ಚೀಟಿದಾರರಿಗೆ ಅಕ್ಕಿ ಬದಲು ಜೋಳ ಐದು ಕೆಜಿ ಅಥವಾ ರಾಗಿ ಐದು ಕೆಜಿ, ತೊಗರಿ ಬೇಳೆ ಒಂದು ಕೆಜಿ, ಶೇಂಗಾ ಒಂದು ಕೆಜಿ ಕೊಡಬೇಕು. ಇದರಿಂದ ಪ್ರೊಟೀನ್‌ಯುಕ್ತ ಆಹಾರ ನೀಡಿದಂತಾಗಲಿದೆ. ಈ ಕುರಿತು ಸಂಘ ಪರಿಣತರಿಂದ ವರದಿ ಸಿದ್ಧಪಡಿಸಿದ್ದು. ಐದು ಕೆಜಿ ಅಕ್ಕಿ ಕೊಡಲು ೯ ಸಾವಿರ ಕೋಟಿ ರೂ. ಖರ್ಚಾಗಲಿದೆ. ಜೋಳ, ರಾಗಿ, ತೊಗರಿ ಬೇಳೆ, ಶೇಂಗಾ ಕೊಟ್ಟರೆ ೬೮೦೦ ಕೋಟಿ ರೂ. ಖರ್ಚಾಗಲಿದೆ. ಈ ಕುರಿತು ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಗೌರವಾಧ್ಯಕ್ಷ ಚಾಮರಸ ಪಾಟೀಲ್, ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ರವಿ ಪೂಚಾ ಇದ್ದರು.