ಜಿಲ್ಲೆ

ಬರ ಪರಿಹಾರ ಅಧಿವೇಶನದ ಪ್ರಥಮ ನಿಲುವಳಿ

ಕಲಬುರಗಿ: ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದು, ರೈತರು ಬಿತ್ತಿದ ಬೆಳೆ ಒಣಗಿದ್ದು, ಬೆಳೆ ಇಲ್ಲದೇ ತೀವ್ರ ಸಂಕಷ್ಟದಲ್ಲಿದ್ದಾರೆ. ಅದರ ಮೇಲೆ ಸರ್ಕಾರ ಬೆಲೆ ಹೆಚ್ಚಳದ ಬರೆ ಎಳೆದಿದ್ದು, ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಪ್ರಥಮ ನಿಲುವಳಿಯನ್ನಾಗಿ ಬರ ಪರಿಹಾರ ಮತ್ತು ರೈತರ ಸಾಲ ಮನ್ನಾವನ್ನು ಚರ್ಚೆಗೆ ತರಲಾಗುವುದು ಎಂದು ವಿಧಾನಸಭೆ ಪ್ರತಿ ಪಕ್ಷ ನಾಯಕ ಆರ್.ಅಶೋಕ ತಿಳಿಸಿದರು.

ಪ್ರತಿಪಕ್ಷ ನಾಯಕರಾಗಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಅವರು ತಾಲೂಕಿನ ಶ್ರೀನಿವಾಸ ಸರಡಗಿಯ ಮೋಕ ತಾಂಡಾದ ರೈತ ಸುರೇಶ ಗಣು ಅವರ ಜಮೀನಿನಲ್ಲಿ ಬರ ಹಾನಿ ಪರಿಶೀಲಿಸಿ ರೈತರ ಸಮಸ್ಯೆ ಆಲಿಸಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕನಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಮೊದಲ ಬಾರಿಗೆ ಆಗಮಿಸಿದ್ದು, ಬರದಿಂದ ತತ್ತರಿಸಿರುವ ರೈತರಿಗೆ ನ್ಯಾಯ ಒದಗಿಸುವುದು ಮೊದಲ ಆದ್ಯತೆ ಎಂದರು.

ಮಧ್ಯಂತರ ಪರಿಹಾರ ಧನ ರೈತರ ಖಾತೆಗೆ ಜಮಾ ಮಾಡಬೇಕು, ಬೆಳೆ ಸಾಲ ಮನ್ನಾ ಮಾಡಬೇಕು, ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂಬ ಬೇಡಿಕೆಯನ್ನು ರೈತರು ಇಟ್ಟಿದ್ದಾರೆ. ರೈತರ ವಿಷಯಗಳನ್ನು ಪ್ರಮುಖವಾಗಿ ಸದನದಲ್ಲಿ ಚರ್ಚಿಸುತ್ತೇನೆ. ರೈತರಿಗೆ ನ್ಯಾಯ ದೊರೆಯುವವರೆಗೆ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರಿಗೆ ಅತಿವೃಷ್ಟಿ ಹಾನಿಯನ್ನು ನಾವು ನೀಡಿದ್ದೇವೆ. ಆಗ ಕೇಂದ್ರ ಸರ್ಕಾರದ ಹಣಕ್ಕಾಗಿ ಕಾದು ಕುಳಿತಿಲ್ಲ. ಈ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಕೇಂದ್ರ ಸರ್ಕಾರದತ್ತ ಮುಖ ಮಾಡಿದೆ. ಮೊದಲು ಇವರು ಕೊಡಲು ನಿಯಮದಂತೆ ಕೇಂದ್ರ ಎನ್‌ಡಿಆರ್‌ಎಫ್ ನಿಧಿಯನ್ನು ನೀಡುವುದು ಸಾಮಾನ್ಯ ಪ್ರಕ್ರಿಯೆ. ನಮ್ಮ ಸರ್ಕಾರದಲ್ಲಿ ಆಗಿದ್ದು ಈಗೇಕೆ ಆಗುವುದಿಲ್ಲ ಎಂದು ಆರ್.ಅಶೋಕ ಪ್ರಶ್ನಿಸಿದರು.

ಹಲವು ಬಾರಿ ಮನವಿ ಸಲ್ಲಿಸಿದರೂ ರೈತರ ಖಾತೆಗೆ ಪರಿಹಾರ ಹಣ ಜಮೆಯಾಗಿಲ್ಲ. ನಾನೂ ಕಂದಾಯ ಇಲಾಖೆ ಸಚಿವನಾಗಿ ರಾಜ್ಯ ವಿಪತ್ತು ನಿರ್ವಹಣೆ ನಿಧಿಯ ಉಸ್ತುವಾಗಿ ಆಗಿದ್ದಾಗ ಪ್ರತ್ಯೇಕ ಆ್ಯಪ್ ಮಾಡಿ, ಎರಡು ತಿಂಗಳ ಒಳಗೆ ಆ್ಯಪ್ ಕೊಡುವ ವ್ಯವಸ್ಥೆ ಮಾಡಿದ್ದೇವು. ಆದರೆ ಈ ಸರ್ಕಾರ ಎರಡು ತಿಂಗಳು ಈಗಾಗಲೇ ವಿಳಂಬ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪ್ಪಿಗೂ ಹಣ ವಸೂಲಿ: ವಿದ್ಯುತ್ ಪರಿವರ್ತಕಕ್ಕೆ (ಟಿಸಿ) ಅರ್ಥಿಂಗ್ ಮಾಡಲು ಉಪ್ಪು, ಇದ್ದಿಲು, ಆಯಿಲ್‌ಗೆ ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ವಿದ್ಯುತ್ ಕಂಬ ಮುರಿದರೂ ಹಣ, ಹೊಸ ಟಿಸಿಗೆ ೪೦ ಸಾವಿರ ಇದಿದ್ದು, ೨ ಲಕ್ಷ ರೂ.ಗೆ ಹೆಚ್ಚಿಸಿದ್ದಾರೆ. ಎಂದು ಆಳಂದ ತಾಲೂಕಿನ ರೈತ ಕಡಗಂಚಿಯ ರೈತ ಗಣೇಶ ಸದಾಪುಲೆ ಅವರು ಆರ್.ಅಶೋಕ ಗಮನಕ್ಕೆ ತಂದರು.