ಚಿತ್ರದುರ್ಗ: ಬಯಲಾಟ ಅತ್ಯಂತ ಪ್ರಾಚೀನ ರಂಗಕಲೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ದುರ್ಗಾದಾಸ್ ಹೇಳಿದರು.
ಅಕಾಡೆಮಿಯಿಂದ ನಗರದ ಬಾಲಭವನದಲ್ಲಿ ಗುರುವಾರ ಬಯಲಾಟ ಕಲಾವಿದರೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ‌್ಯಕ್ರಮದಲ್ಲಿ ಮಾತನಾಡಿದರು.
ಯಕ್ಷಗಾನ ಕರಾವಳಿಗೆ ಸೀಮಿತವಾಗಿದೆ. ಬಯಲಾಟಕ್ಕಿಂತ ಯಕ್ಷಗಾನ ಭಿನ್ನವಾದುದು. ಬಯಲಾಟ ಮತ್ತು ಯಕ್ಷಗಾನದಲ್ಲಿರುವ ವಾದ್ಯಗಳೇ ಬೇರೆಯಾಗಿದ್ದು, ಬಯಲಾಟ-ಯಕ್ಷಗಾನದ ನಡುವೆ ವ್ಯತ್ಯಾಸವಿದೆ ಎಂದರು.
ಬಯಲಾಟ ಕುರಿತು ಬರೆಯುವ ಮಾತನಾಡುವ ವಿದ್ವಾಂಸರ ಸಂಖ್ಯೆ ಕಡಿಮೆಯಾಗಿದ್ದು, ಈ ಕಲಾವಿದರ ಬದುಕು ಸುಧಾರಣೆ ಕುರಿತಂತೆ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಕಲಾವಿದರೊಂದಿಗೆ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.
ಇತಿಹಾಸ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ಬಯಲಾಟ ಕಲಾವಿದರೆಂದು ನಿರ್ಲಕ್ಷೃಸುವಂತಿಲ್ಲ. ಸ್ವಾಭಿಮಾನದ ಬದುಕು ನಿಮ್ಮದು. ಸರ್ಕಾರ ಕೂಡ ಕಲೆಯನ್ನು ಉಳಿಸಿ ಬೆಳೆಸಲು ಪ್ರೋತ್ಸಾಹ ನೀಡುತ್ತಿದೆ. ಬಯಲಾಟ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ ಎಂದರು.
ನಿವೃತ್ತ ಪ್ರಾಧ್ಯಾಪಕಿ ಯಶೋಧಾ ರಾಜಶೇಖರಪ್ಪ ಮಾತನಾಡಿ, ಸರ್ಕಾರ ಈ ಕಲೆಯನ್ನು ಉಳಿಸಲು ಕಲಾವಿದರಿಗೆ ಶಕ್ತಿ ತುಂಬ ಬೇಕಿದೆ ಎಂದು ತಿಳಿಸಿದರು.
ಅಕಾಡೆಮಿ ಮಾಜಿ ಸದಸ್ಯ ಡಾ.ಬಿ.ಎಂ.ಗುರುನಾಥ್ ಮಾತನಾಡಿ, ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಬಯಲಾಟವನ್ನು ಮಾರ್ಪಾಡಿಸಿಗೊಳಿಸುವುದು ಅಗತ್ಯವಿದೆ. ಅಕ್ಷರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸಿದಾಗ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯವಾಗಲಿದೆ ಎಂದರು.
ಅಕಾಡೆಮಿ ಸದಸ್ಯರಾದ ನಿಂಗಪ್ಪ, ಬಿ.ಮಾರನಾಯಕ, ಜಾನಪದ ವಿದ್ವಾಂಸರಾದ ಮೈಲಹಳ್ಳಿ ರೇವಣ್ಣ, ಡಾ.ಚಿಕ್ಕಣ್ಣ ಎಣ್ಣೆಕಟ್ಟೆ ಇತರರು ಇದ್ದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಸೇರಿ ದಾವಣಗೆರೆ, ಜಗಳೂರು, ಕೂಡ್ಲಿಗಿ, ಮೊಳಕಾಲ್ಮೂರು, ನಾಯಕನಹಟ್ಟಿ ಮತ್ತಿರೆಡೆಗಳಿಂದ ಆಗಮಿಸಿದ್ದ ಬಯಲಾಟ ಕಲಾವಿದರು ಕಾರ‌್ಯಕ್ರಮದಲ್ಲಿ ಕಲಾ ಪ್ರದರ್ಶನ ನೀಡಿದರು.