ನವೀನ್ ಚಂದ್ರ ಶೆಟ್ಟಿ ಆನೇಕಲ್
ಎರಡು ವರ್ಷದಿಂದ ಮಂಕು ಕವಿದಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಪ್ರವಾಸಿಗರ ಕಲರವ ಆರಂಭವಾಗಿದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರಾಣಿ ಪಕ್ಷಿಗಳ ವೀಕ್ಷಣೆಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು, ಉದ್ಯಾನದ ವೈಭವ ಮರುಕಳಿಸಿದೆ.
ಪ್ರತಿದಿನ ಸಾವಿರಾರು ಪ್ರವಾಸಿಗರು ಪ್ರಾಣಿ-ಪಕ್ಷಿಗಳ ವೀಕ್ಷಣೆಗೆ ಬರುತ್ತಿರುವ ದೃಶ್ಯ ಕಂಡುಬರುತ್ತಿದೆ.
ಬೇಸಿಗೆಯಲ್ಲಿ ಪ್ರಾಣಿಗಳು ಉದ್ಯಾನದ ಕೆರೆ ಹಾಗೂ ಕೊಳ್ಳಗಳ ನೀರಿನಲ್ಲಿ ಆಟವಾಡುತ್ತಿರುವುದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಅದರಲ್ಲೂ ಉದ್ಯಾನದ ಆನೆ ಬಿಡಾರ, ಸೀಗೆಕಟ್ಟೆ ಕೆರೆಯಲ್ಲಿ 20ಕ್ಕೂ ಹೆಚ್ಚು ಆನೆಗಳು, ಮರಿಗಳ ಜತೆ ಜಲಕ್ರೀಡೆ ನಡೆಸುತ್ತಿರುವುದು ಪ್ರಮುಖ ಆಕರ್ಷಣೆ ಎನಿಸಿದೆ. ಮಾವುತರು ಆನೆಗಳನ್ನು ನೀರಿನಿಂದ ಹೊರತರಲು ಹರಸಾಹಸ ನಡೆಸುವುದು, ಆನೆಗಳು ಹೊರಬರಲು ಹಿಂದೇಟು ಹಾಕುವ ದೃಶ್ಯ ಪ್ರವಾಸಿಗರಿಗೆ ಮನರಂಜನೆ ನೀಡುತ್ತಿದೆ.
ನೀರಿಗಿಲ್ಲ ಕೊರತೆ: ಉದ್ಯಾನದಲ್ಲಿ ಜಿರಾಫೆ, ಜೀಬ್ರಾ, ಹುಲಿ, ಹಾವು ಸೇರಿ ನೂರಾರು ಪ್ರಾಣಿಗಳ ನೀರಿನ ದಾಹ ತಣಿಸಲು ಕೊಳವೆಬಾವಿಗಳನ್ನು ಕೊರೆಸಲಾಗಿದ್ದು, ಬೇಸಿಗೆಯಾದರೂ ಎಲ್ಲಿಯೂ ನೀರಿನ ಕೊರತೆ ಎದುರಾಗದಂತೆ ಸಿಬ್ಬಂದಿ ಮುಂಜಾಗ್ರತೆ ವಹಿಸಿದ್ದಾರೆ. ಜಿಂಕೆ, ಕಡವೆ ಸೇರಿ ನೂರಾರು ಪ್ರಾಣಿಗಳನ್ನು ಒಂದೇ ಜಾಗದಲ್ಲಿ ನೋಡುವ ವ್ಯವಸ್ಥೆ ಇರುವುದು ಪ್ರವಾಸಿಗರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿದೆ.
ಪ್ರಾಣಿ-ಪಕ್ಷಿಗಳ ಪಾಲನೆಗೆ ನಿಗಾವಹಿಸಲಾಗಿದೆ. ಯಾವುದೇ ಪ್ರಾಣಿಗೆ ಸಣ್ಣ ಪ್ರಮಾಣದ ರೋಗಲಕ್ಷಣ ಕಂಡುಬಂದರೂ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ, ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲಾಗಿದ್ದು, ಆತಂಕವಿಲ್ಲದೆ ವಿಹರಿಸಬಹುದಾಗಿದೆ. ಡಾ. ಉಮಾಶಂಕರ್, ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯಾಧಿಕಾರಿ ಕಳೆದೆರಡು ವರ್ಷದಿಂದ ಕರೊನಾ ಕಾರಣ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಮಂಕು ಕವಿದಂತಿತ್ತು. ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ, ಬೇಸಿಗೆ ರಜೆ ಹಿನ್ನೆಲೆಯಲ್ಲಿ ಮಕ್ಕಳು ಪಾಲಕರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ರಮೇಶ್, ಸಹಾಯಕ ನಿರ್ದೇಶಕ ಬನ್ನೇರುಘಟ್ಟ ಜೈವಿಕ ಉದ್ಯಾನವನ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಇಲ್ಲಿನ ಪ್ರಾಣಿಪಕ್ಷಿಗಳನ್ನು ವೀಕ್ಷಿಸಲು ಬಂದಿದ್ದೇವೆ, ಇಲ್ಲಿನ ವಾತಾವರಣ ಖುಷಿ ನೀಡುತ್ತಿದೆ, ಇಲ್ಲಿನ ನಿರ್ವಹಣೆಯೂ ಉತ್ತಮವಾಗಿದೆ, ಪ್ರಾಣಿಪ್ರಪಂಚವನ್ನು ನೋಡಿ ಆನಂದಿಸಲು ಇದು ಉತ್ತಮ ಜಾಗ. ಪ್ರೀತಿ, ಪ್ರವಾಸಿಗರು ಬೆಂಗಳೂರು