ನವೀನ್‌ಚಂದ್ರ ಶೆಟ್ಟಿ ಆನೇಕಲ್
ಬನ್ನೇರುಘಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಹಾರಗದ್ದೆ ಮುಖ್ಯರಸ್ತೆ ಅಕ್ಕಪಕ್ಕ ಇರುವ ಅಸಂಖ್ಯಾತ ಗ್ರಾನೈಟ್ ಕಾರ್ಖಾನೆಗಳು ಮತ್ತು ಕಂಪನಿಗಳು ಕಾಡಿನ ಪರಿಸರವನ್ನು ಹಾಳು ಮಾಡಲು ಪಣತೊಟ್ಟಂತೆ ಕಾಣುತ್ತಿವೆ. ಗ್ರಾನೈಟ್ ಕಲ್ಲುಗಳನ್ನು ಕತ್ತರಿಸಲು ಬಳಸುವ ರಾಸಾಯನಿಕಗಳ ಮಿಶ್ರಿತ ನೀರನ್ನು ಕಾಡಂಚಿನಲ್ಲಿ ವಿಲೇವಾರಿ ಮಾಡಿ, ಅರಣ್ಯನಾಶಕ್ಕೆ ಮುನ್ನುಡಿ ಬರೆದಿವೆ.
ರಾತ್ರಿ ವೇಳೆ ನೀರು ಕುಡಿಯಲು ಬರುವ ಕಾಡುಪ್ರಾಣಿಗಳು ಈ ನೀರನ್ನೇ ಕುಡಿಯುವುದರಿಂದ ಅವುಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಸಾಯನಿಕ ಮಿಶ್ರಿತ ನೀರನ್ನು ಸಂಸ್ಕರಿಸಿ, ವಿಲೇವಾರಿ ಮಾಡಬೇಕು ಎಂಬ ನಿಯಮವಿದೆ. ಇದರನ್ವಯ ನೀರನ್ನು ವಿಲೇವಾರಿ ಮಾಡುವಂತೆ ಸ್ಥಳೀಯರು ಆಗ್ರಹಿಸಿದರೆ, ಗ್ರಾನೈಟ್ ಕಾರ್ಖಾನೆಗಳು ಮತ್ತು ಕಂಪನಿಗಳು ಸಾಕಿಕೊಂಡಿರುವ ಪುಡಿರೌಡಿಗಳು ಜನರನ್ನು ಬೆದರಿಸಿ, ಅಪಾಯಕಾರಿ ತ್ಯಾಜ್ಯದ ವಿಲೇವಾರಿ ನಿರಾತಂಕವಾಗಿ ಮುಂದುವರಿಯುವಂತೆ ಮಾಡುತ್ತಿದ್ದಾರೆ. ಈ ಅಕ್ರಮ ತಡೆಗಟ್ಟುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿ ಸರ್ಕಾರದ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರೂ, ಯಾರೊಬ್ಬರೂ ಇತ್ತ ಗಮನಹರಿಸುತ್ತಿಲ್ಲ.
ಕೊಳೆಗೇರಿ ನಿವಾಸಿಗಳ ಮನೆಗಳಿಗೂ ಧಕ್ಕೆ: ಕೊಳೆಗೇರಿ ನಿರ್ಮೂಲನಾ ಮಂಡಳಿ ಕೊಳೆಗೇರಿ ನಿವಾಸಿಗಳಿಗಾಗಿ ಆ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸುತ್ತಿದೆ. ಈ ಮನೆಗಳು ಕಾಡಿನ ಪ್ರದೇಶಕ್ಕೆ ಹತ್ತಿರವಾಗಿಯೇ ಇದೆ. ಇದೇ ಪ್ರದೇಶದಲ್ಲಿ ಗ್ರಾನೈಟ್ ಕಂಪನಿಗಳು ಅಪಾಯಕಾರಿ ನೀರಿನ ತ್ಯಾಜ್ಯ ತಂದು ಸುರಿಯುತ್ತಿವೆ. ಇದರಿಂದಾಗಿ ಕೊಳೆಗೇರಿ ನಿವಾಸಿಗಳ ಮನೆಗಳ ಸುತ್ತಮುತ್ತಲ ಪರಿಸರವೂ ಹಾಳಾಗುತ್ತಿದೆ. ಇಂಥ ಅಕ್ರಮ ತಡೆಗಟ್ಟುವ ಬದಲು ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿರುವುದಕ್ಕೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಾರೋಷವಾಗಿ ಅಕ್ರಮ: ಈ ಹಿಂದೆ ಗ್ರಾನೈಟ್ ಕಂಪನಿಗಳು ರಾತ್ರಿ ವೇಳೆ ರೈತರ ಜಮೀನಿನಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ ಹೋಗುತ್ತಿದ್ದವು. ಆದರೆ, ಈಗ ಆನೇಕಲ್ ತಾಲೂಕಿನ ಅಗಸ ತಿಮ್ಮನಹಳ್ಳಿ ಬಳಿಯ ರೈತರಿಗೆ ಹಣದ ಆಮಿಷ ಒಡ್ಡುತ್ತಿರುವ ಗ್ರಾನೈಟ್ ಕಂಪನಿ ಮಾಲೀಕರು ರಾಜಾರೋಷವಾಗಿ ಹಾಡಹಗಲೇ ರಾಸಾಯನಿಕ ನೀರಿನ ತ್ಯಾಜ್ಯವನ್ನು ಜಮೀನುಗಳಲ್ಲೇ ವಿಲೇವಾರಿ ಮಾಡುತ್ತಿದ್ದಾರೆ. ಇದರಿಂದ ಅಕ್ಕಪಕ್ಕದ ಜಮೀನುಗಳಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಿರುವ ರೈತರಿಗೆ ತೊಂದರೆ ಆಗುತ್ತಿದೆ. ವಿಲೇವಾರಿ ಮಾಡದಂತೆ ಮನವಿ ಮಾಡಿಕೊಂಡರೂ ಪ್ರಯೋಜನವಾಗುತ್ತಿಲ್ಲ ಎನ್ನಲಾಗಿದೆ.
ಗಮನಸೆಳೆದಿದ್ದ ವಿಜಯವಾಣಿ, ದಿಗ್ವಿಜಯ: ಗ್ರಾನೈಟ್ ಕಂಪನಿಗಳು ಇಂಥ ಅಕ್ರಮ ಎಸಗುತ್ತಿರುವ ಸಂಗತಿಯನ್ನು ಎರಡು ವರ್ಷಗಳ ಹಿಂದೆ ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿ ಬಹಿರಂಗಪಡಿಸಿದ್ದವು. ಆಗ ಅರಣ್ಯ ಸಚಿವರಾಗಿದ್ದ ಆನಂದ್ ಸಿಂಗ್ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಈ ಅಕ್ರಮ ತಡೆದಿದ್ದರು. ಇದೀಗ ಮತ್ತೊಮ್ಮೆ ಈ ಕರಾಳ ದಂಧೆ ಆರಂಭವಾಗಿದೆ. ಗ್ರಾಮದ ಮಧ್ಯದಲ್ಲೇ ಅಕ್ರಮ ನಡೆಯುತ್ತಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ ಕಣ್ಮುಚ್ಚಿ ಕುಳಿತಿದೆ.
ನಿಷ್ಪ್ರಯೋಜಕವಾದ ಜಮೀನು: ಜಮೀನುಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ, ಜಮೀನುಗಳು ಕಲ್ಲು ಬೆಟ್ಟದ ರೂಪ ತಳೆಯುತ್ತಿವೆ. ಬೆಳೆ ಬೆಳೆಯಲು ನಿಷ್ಪ್ರಯೋಜಕವಾಗಿ ಮಾರ್ಪಡುತ್ತಿವೆ. ಹಸಿರು ವಲಯದಲ್ಲೇ ಇಂಥ ಪರಿಸ್ಥಿತಿ ಉಂಟಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಸರ್ಕಾರ ನಿಗದಿ ಮಾಡಿದ ಜಾಗದಲ್ಲಿ ರಾಸಾಯನಿಕ ಮಿಶ್ರಿತ ನೀರನ್ನು ವಿಲೇವಾರಿ ಮಾಡಬೇಕು. ಆದರೆ ಗ್ರಾನೈಟ್ ಮಾಲೀಕರು ಅಗಸ ತಿಮ್ಮನಹಳ್ಳಿಯ ಜಮೀನುಗಳಲ್ಲಿ ಸುರಿಯುತ್ತಿರುವ ದೂರು ಬಂದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ದಿನೇಶ್, ಆನೇಕಲ್ ತಹಸೀಲ್ದಾರ್ ಹಾರಗದ್ದೆ ಸುತ್ತಮುತ್ತಲ ಗ್ರಾನೈಟ್ ಕಾರ್ಖಾನೆಗಳು ಅಕ್ರಮವಾಗಿ ಅಪಾಯಕಾರಿ ತ್ಯಾಜ್ಯ ವಿಲೇವಾರಿ ಮಾಡುತ್ತಿವೆೆ. ಕ್ಯಾಂಟರ್ ಲಾರಿಗಳಲ್ಲಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಈ ವಿಷಯ ಅಧಿಕಾರಿಗಳಿಗೂ ಗೊತ್ತಿದೆ. ಆದರೆ, ಹಣದಾಸೆಯಿಂದಾಗಿ ಜಾಣಕುರುಡರಾಗಿದ್ದಾರೆ. ರವಿಕುಮಾರ್, ಸ್ಥಳೀಯ ನಿವಾಸಿ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದೇ ಮಾರ್ಗದಲ್ಲಿ ದಿನವೂ ಓಡಾಡುತ್ತಾರೆ. ತಮ್ಮ ಕಣ್ಣೆದುರೇ ಅಕ್ರಮ ನಡೆಯುತ್ತಿದ್ದರೂ ಗಮನಿಸುವುದಿಲ್ಲ. ಹೀಗಾಗಿ ಅಧಿಕಾರಿಗಳ ಭಯ ಇಲ್ಲದೇ ಕಂಪನಿಗಳು ತ್ಯಾಜ್ಯ ವಿಲೇವಾರಿ ಮಾಡುತ್ತಿವೆ. ಶ್ರೀನಿವಾಸ್, ಸ್ಥಳೀಯ ನಿವಾಸಿ