ಜಿಲ್ಲೆ

ಬನ್ನಿಸಾರಿಗೆಯಲ್ಲಿ ಮಕ್ಕಳ ಸಂಸತ್ ಚುನಾವಣೆ

ಯಳಂದೂರು: ಆಟಗಳಲ್ಲಿ ಮೈ ಮರೆಯಬೇಕಿದ್ದ ಮಕ್ಕಳೆಲ್ಲ ಶನಿವಾರ ಮತದಾರರಾಗಿ ಗಂಭೀರ ವದನದೊಂದಿಗೆ ಬದಲಾಗಿ ಮತ ಚಲಾವಣೆಗೆ ಮತಗಟ್ಟೆ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತಿದ್ದರು. ರಾಜಕೀಯಕ್ಕೆ ಧುಕುಕಿದ್ದ ವಿದ್ಯಾರ್ಥಿಗಳೆಲ್ಲ ಥೇಟ್ ರಾಜಕಾರಣಿಗಳಂತೆ ಸಹಪಾಠಿ ಮತದಾರರ ಮನ ಓಲೈಸುವ ಕಸರತ್ತು ಗಮನ ಸೆಳೆಯುತ್ತಿತ್ತು. ಭದ್ರತಾ ಸಿಬ್ಬಂದಿ ನಿಯೋಜನೆ ಇಲ್ಲದಿದ್ದರೂ ಮತದಾನ ಶಾಂತಿಯುತವಾಗಿ ನಡೆಯಿತು, ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ…


ಇದು ತಾಲೂಕಿನ ಬನ್ನಿಸಾರಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಡು ಬಂದ ದೃಶ್ಯ. ಇಲ್ಲಿ ನಡೆದ ಮಕ್ಕಳ ಸಂಸತ್ ಚುನಾವಣೆಯಲ್ಲಿ ಕೇಕೆ ಹಾಕಿ ಆಡುತ್ತಿದ್ದವರೆಲ್ಲ ಚುನಾವಣೆಯ ಸಂದರ್ಭದಲ್ಲಿ ಗಂಭೀರವದನರಾಗಿ ಗುಸುಗುಸು ಮಾತನಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಚುನಾವಣೆಯ ಕಣದಲ್ಲಿ ಒಟ್ಟು 8 ಜನ ಅಭ್ಯರ್ಥಿಗಳಿದ್ದರು. ಮತದಾನಕ್ಕಾಗಿ ನೈಜ ಮತದಾನ ಮಾದರಿಯಲ್ಲಿ ಇವಿಎಂ ಮತಯಂತ್ರ ಇಡಲಾಗಿತ್ತು. ಚುನಾವಣೆ ಅಧಿಸೂಚನೆಯನ್ನು ಜೂ.27 ಹೊರಡಿಸಲಾಗಿತ್ತು. ಇದರೊಂದಿಗೆ ನಾಮಪತ್ರ ಸಲ್ಲಿಕೆ, ಹಿಂಪಡೆಯುವ ದಿನಾಂಕ, ನೀತಿ ಸಂಹಿತೆ ಸೇರಿದಂತೆ ಪ್ರತಿಯೊಂದನ್ನು ಅಚ್ಚುಕಟ್ಟಾಗಿ ಶಾಲಾ ಮಕ್ಕಳು ಪಾಲಿಸಿಕೊಂಡು ಬಂದರು. ಶನಿವಾರ ಬೆಳಗ್ಗೆ 9 ಗಂಟೆಯಿಂದ 11 ಗಂಟೆ ವರೆಗೆ ಮತದಾನ ನಡೆಸಲಾಯಿತು. ಇದಕ್ಕೆ ಮಕ್ಕಳನ್ನೇ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿತ್ತು, ಬೆಳಗ್ಗೆ ಭವಿಷ್ಯದ ಮತದಾರರು ಸರತಿ ಸಾಲಿನಲ್ಲಿ ನಿಂತು ಕೈಗೆ ಶಾಹಿಯನ್ನು ಹಾಕಿಸಿಕೊಂಡು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಚಲಾಯಿಸಿದರು. ಒಟ್ಟು 121 ಮತದಾರರು ಈ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.


ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಎಂ.ಮನ್ವಿತ್-27, ನಂದಿನಿ-19, ಪೃಥ್ವಿರಾಜ್-9, ಅಮೃತ-8, ಶಿಲ್ಪಾ-8, ಆಕಾಶ್-7, ಸಾಗರ್-4, ಯಶವಂತ್-4 ಮತಗಳನ್ನು ಪಡೆದರು.


ಅತೀ ಹೆಚ್ಚು ಮತ ಪಡೆದ ಎಂ. ಮನ್ವಿತ್ ಜಯಶೀಲರಾದರು. ನೈಜ ಮತದಾದ ಅನುಭವವನ್ನು ಮಕ್ಕಳು ಅನುಭವಿಸುವುದರಿಂದ ಮತದಾನ ಹಕ್ಕಿನ ಬಗ್ಗೆ ಜಾಗೃತಿ, ಉತ್ತಮ ಅಭ್ಯರ್ಥಿಯ ಆಯ್ಕೆ ಸೇರಿದಂತೆ ಇಡೀ ಚುನಾವಣೆ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್ ಸದಸ್ಯ ಚಂದ್ರೇಶ್, ಶಿಕ್ಷಕರಾದ ಅಮ್ಮನಪುರ ಮಹೇಶ್, ಸೌಮ್ಯಾ, ಮಹದೇವ, ಉಷಾ ಇತರರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.