ಮೈಸೂರು: ನಗರದ ಬನ್ನಿಮಂಟಪದಲ್ಲಿ ಆಧುನಿಕ ಬಸ್ ನಿಲ್ದಾಣವನ್ನು 120 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಧಾನಸಭೆಯಲ್ಲಿ ಗುರುವಾರ ಸಂಜೆ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿದೆ.
ಸಚಿವ ಸಂಪುಟದ ನಿರ್ಣಯಗಳ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ್ ಅವರು ಮಾಹಿತಿ ನೀಡಿದರು.
ಸಾರಿಗೆ ಇಲಾಖೆ ವತಿಯಿಂದ ಬನ್ನಿಮಂಟಪದಲ್ಲಿರುವ ಕೆಎಸ್‌ಆರ್‌ಟಿಸಿ ಡಿಪೋ ಆವರಣದಲ್ಲಿ ಆಧುನಿಕ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಇದರಿಂದ ನಗರಕ್ಕೆ ಹೊಸ ಬಸ್ ನಿಲ್ದಾಣ ದೊರೆಯಲಿದ್ದು, ಇದು ನಿರ್ಮಾಣಗೊಂಡ ಬಳಿಕ ಅಲ್ಲಿಗೆ ಗ್ರಾಮಾಂತರ ಬಸ್ ನಿಲ್ದಾಣ ಸ್ಥಳಾಂತರವಾಗಲಿದೆ.
ಈಗಿರುವ ಗ್ರಾಮಾಂತರ ಬಸ್ ನಿಲ್ದಾಣದ ಮೇಲಿನ ಒತ್ತಡ ಹೆಚ್ಚಾಗಿದೆ. ಹೀಗಾಗಿ ಮೈಸೂರಿನ ಬನ್ನಿಮಂಟಪದಲ್ಲಿರುವ ಕೆಎಸ್‌ಆರ್‌ಟಿಸಿಗೆ ಸೇರಿದ 61 ಎಕರೆ ಜಾಗದಲ್ಲಿ 14 ಎಕರೆ ಬಳಕೆ ಮಾಡಿಕೊಂಡು ಹೊಸ ಗ್ರಾಮಾಂತರ ಬಸ್ ನಿಲ್ದಾಣ ನಿರ್ಮಿಸಲು ಈಗಾಗಲೇ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ.
ಮೊದಲ ಹಂತದಲ್ಲಿ ನೆಲ ಮಹಡಿ, ಕೆಳಮಹಡಿ, ಪಾರ್ಕಿಂಗ್ ಸ್ಥಳ ನಿರ್ಮಾಣಕ್ಕೆ 65 ಕೋಟಿ ರೂ. ಯೋಜನೆ ಹಾಗೂ 2ನೇ ಕೇಂದ್ರ, ಸೌಲಭ್ಯ ನೀಡಲು 35 ಕೋಟಿ ರೂ. ಸೇರಿದಂತೆ 100 ಕೋಟಿ ರೂ.ಗಳ ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈಗ ಯೋಜನಾ ವೆಚ್ಚ 100 ಕೋಟಿ ರೂ.ದಿಂದ 120 ಕೋಟಿ ರೂ.ಗೆ ಏರಿಕೆಯಾಗಿದೆ.
ಸದ್ಯ ಇರುವ ಗ್ರಾಮಾಂತರ ಬಸ್ ನಿಲ್ದಾಣವನ್ನು ಹಾಗೆಯೇ ಉಳಿಸಿಕೊಂಡು ಮೈಸೂರು ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಗೆ ಇಲ್ಲಿಂದ ಸೇವೆ ನೀಡಲಾಗುತ್ತದೆ. ದೂರದ ಊರುಗಳಿಗೆ ಹೊಸ ನಿಲ್ದಾಣದಿಂದ ಸೇವೆ ಆರಂಭಿಸಲು ಆಲೋಚಿಸಲಾಗಿದೆ. ಇದರಿಂದ ಸಬರ್ಬ್ ನಿಲ್ದಾಣದ ಮೇಲೆ ಅರ್ಧದಷ್ಟು ಒತ್ತಡ ತಗ್ಗಲಿದೆ.
ಆಗ ನಗರ ಸಾರಿಗೆ ವಿಭಾಗದಿಂದ ಸಂಚರಿಸುವ ಬಸ್‌ಗಳು ಗ್ರಾಮಾಂತರ ಬಸ್ ನಿಲ್ದಾಣದ ಒಳಗೆ ಬಂದು ಪಿಕ್‌ಅಪ್ ಮಾಡಿಕೊಂಡು ಹೋಗಲು ಅವಕಾಶ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಕೇವಲ 4 ಎಕರೆ ಜಾಗದ ಗ್ರಾಮಾಂತರ ನಿಲ್ದಾಣದಲ್ಲಿ ಸಮಸ್ಯೆಗಳ ಆಗರವಾಗಿದ್ದು, ಕಾರ್ಯನಿರ್ವಹಣೆ ಸವಾಲಿನ ಕೆಲಸವಾಗಿದೆ. ನಿಲ್ದಾಣದಿಂದ 2600 ಬಸ್‌ಗಳ ಸಂಚಾರ, ಪ್ರವೇಶ ದ್ವಾರದ ಬಳಿಯೇ ವಾಹನ ದಟ್ಟಣೆ, ನಿಲ್ದಾಣದ ಒಳಭಾಗದಲ್ಲಿ ಬಸ್ ನಿಲುಗಡೆಗೆ ಸ್ಥಳದ ಕೊರತೆ, ವಾರಾಂತ್ಯ, ಹಬ್ಬ ಹರಿದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ನಿರ್ವಹಣೆ ಕಷ್ಟಕರವಾಗಿದೆ.