ಜಿಲ್ಲೆ

ಬನಶಂಕರಿ ಅಮ್ಮನ 26ನೇ ವಾರ್ಷಿಕ ಪೂಜಾ ಮಹೋತ್ಸವ ಸಂಭ್ರಮ

ಶನಿವಾರಸಂತೆ: ಸಮೀಪದ ಗೋಪಾಲಪುರ ಗ್ರಾಮದ ದೇವಾಂಗ ಸಂಘದಿಂದ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನದ 26ನೇ ವಾರ್ಷಿಕ ಪೂಜಾ ಮಹೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.


ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಶ್ರೀ ಬನಶಂಕರಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಶ್ರೀ ಸೂಕ್ತ, ದುರ್ಗಾಸೂಕ್ತ, ದೇವಿಸೂಕ್ತಗಳ ಅಭಿಷೇಕದ ನಂತರ ಗಣಪತಿ ಪೂಜೆ, ಪುಣ್ಯಾಹ, ಋತ್ವಿಕ್ ವರ್ಣ, ಕಲಶಾರಾಧನೆ ನಂತರ ಗಣಪತಿ ಹೋಮ, ನವಗ್ರಹ ಹೋಮ, ದುರ್ಗಾಹೋಮ, ಮೃತ್ಯುಂಜಯ ಹೋಮವನ್ನು ನೆರವೇರಿಸಲಾಯಿತು. ನಂತರ ಪುಣ್ಯಾಹುತಿ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.


ಸಂಜೆ ಶ್ರೀ ಬನಶಂಕರಿ ಅಮ್ಮನವರ ಉತ್ಸವ ಮೂರ್ತಿಯನ್ನು ವಾದ್ಯಗೋಷ್ಠಿ, ವೀರಗಾಸೆ ಕುಣಿತದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶೋಭಯಾತ್ರೆ ಮೆರವಣಿಗೆ ಸಾಗಿತು.


ಅರ್ಚಕರಾದ ಪ್ರಸನ್ನ ಭಟ್ ಮತ್ತು ನಾಗೇಶ್ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ದೇವಸ್ಥಾನ ಸಮಿತಿ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.