ಜಿಲ್ಲೆ

ಬನಶಂಕರಿ ದೇವಿಗೆ ಅಲಂಕಾರ ಸೇವೆ

ಚಿತ್ರದುರ್ಗ: ಐತಿಹಾಸಿಕ ಕೋಟೆ ಆವರಣದಲ್ಲಿರುವ ಬನಶಂಕರಿ ದೇವಿ ದೇಗುಲದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಭಾನುವಾರ ವಿಶೇಷ ಪೂಜೆ, ಅಲಂಕಾರ ಸೇವೆ ನೆರವೇರಿತು.
ದೇವಿ ಮೂರ್ತಿಗೆ ಮುಂಜಾನೆ 4ಕ್ಕೆ ಅಭಿಷೇಕ, ಬೆಳಗ್ಗೆ 8.30ಕ್ಕೆ ಹೋಮ, ಮಹಾಮಂಗಳಾರತಿ ಸೇವೆ ಜರುಗಿತು. ನೂರಾರು ಭಕ್ತರು ಪಾಲ್ಗೊಂಡು ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿಕೊಂಡರು. ನಂತರ ನೆರೆದಿದ್ದ ಭಕ್ತರಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು.
ಆಷಾಢ ಮಾಸ ಆರಂಭದ ಅಂಗವಾಗಿ ನಡೆದ ಪೂಜೆಯಲ್ಲಿ ಬನಶಂಕರಿ ದೇವಿಯ ಎರಡೂ ಮೂರ್ತಿಗಳನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.
ಏಕನಾಥೇಶ್ವರಿ, ಕಣಿವೆಮಾರಮ್ಮ, ತಿಪ್ಪಿನಘಟ್ಟಮ್ಮ, ಉಚ್ಚಂಗಿಯಲ್ಲಮ್ಮ, ಬರಗೇರಮ್ಮ ಸೇರಿ ಶಕ್ತಿದೇವತೆಗಳ ದೇಗುಲಗಳಲ್ಲೂ ಅಮಾವಾಸ್ಯೆ ಪೂಜೆಯಲ್ಲಿ ಅನೇಕ ಭಕ್ತರು ಪಾಲ್ಗೊಂಡಿದ್ದರು. ವಾಹನಗಳ ಪೂಜೆಗಳು ನಡೆದವು.