ಜಿಲ್ಲೆ

ಬನವಾಸಿಯೊಂದಿಗೆ ಅವಿನಾಭಾವ ಸಂಬಂಧ

ಶಿರಸಿ: ಆದಿಕವಿ ಪಂಪನ ಹೆಸರಲ್ಲಿ ನೀಡುವ ರಾಜ್ಯಮಟ್ಟದ ಪ್ರತಿಷ್ಠಿತ ಪಂಪ ಪ್ರಶಸ್ತಿ ಸ್ವೀಕರಿಸಿದ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಅವರಿಗೆ ಕನ್ನಡದ ಪ್ರಥಮ ರಾಜಧಾನಿಯಾದ ಬನವಾಸಿಯೊಟ್ಟಿಗೆ ಅವಿನಾಭಾವ ಸಂಬಂಧವಿದೆ.

2018ರ ಫೆಬ್ರವರಿ 2ರಂದು ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ಪಂಪ ಪ್ರಶಸ್ತಿ ಸ್ವೀಕರಿಸಿ, ಕನ್ನಡ ನಾಡು- ನುಡಿಯ ಕುರಿತಾಗಿ ತಮ್ಮೊಳಗಿನ ಸಂಕಟ ಹಂಚಿಕೊಂಡಿದ್ದರು. ‘ಮೂರ್ತಿಗಾಗಿ ಮುಗಿದ ಕೈಯು ಗುಡಿಗು ಸಲ್ಲುವಂತೆಯೇ ಎಲ್ಲ ಒಂದೆಂಬಂತೆಯೇ ಹಾಡಲಾಗಿ ಜನವು ನನ್ನ ಕವಿಯೆಂದು ಕರೆದಿದೆ...’ ಎಂಬ ದ.ರಾ. ಬೇಂದ್ರೆಯವರ ಪದ್ಯದೊಂದಿಗೆ ಮಾತನ್ನು ಆರಂಭಿಸಿದ್ದ ಅವರು, ಕನ್ನಡಿಗರು ಎಲ್ಲವನ್ನು ಒಳಗೊಳ್ಳುವ ಸಂಸ್ಕೃತಿಯವರೇ ವಿನಹಃ ವಿಘಟಿತ ಸಂಸ್ಕೃತಿಯ ಪ್ರತಿನಿಧಿಗಳು ಅಲ್ಲ. ಇದನ್ನು ನಾವು ನೆನಪಿಡಬೇಕು ಎಂದಿದ್ದರು. ಕನ್ನಡಿಗರು ಎಲ್ಲರನ್ನೂ ಅತಿಥಿಗಳಾಗಿ ಕಾಣುವರು. ಎಲ್ಲ ರೀತಿ ದೊಡ್ಡತನ ಕಾಪಾಡಿಕೊಂಡು ಬಂದಿದ್ದೇವೆ. ಇದೇ ಔದಾರ್ಯವನ್ನು ರಾಜರು ಸಹ ಅಂದು ಕಾಪಾಡಿಕೊಂಡು ಬಂದಿದ್ದರು. ಕೆಲವೊಮ್ಮೆ ಈ ಔದಾರ್ಯವೇ ಕನ್ನಡಿಗರಿಗೆ ಮುಳುವಾಗುತ್ತಿದೆ. ನಾಡು ನುಡಿಗೆ ನಾವು ಎಲ್ಲವನ್ನೂ ತ್ಯಾಗ ಮಾಡಬೇಕು. ರಾಜಧಾನಿಯಲ್ಲಿ ಕನ್ನಡದ ಉಳಿವು ಕಷ್ಟ. ಸಣ್ಣ ಸಣ್ಣ ಊರು, ನಗರಗಳಲ್ಲಿ ಕನ್ನಡ ಇನ್ನೂ ಉಳಿದಿದೆ. ನನ್ನ ತಲೆಮಾರಿನ ಹಿರಿಯರು ಈ ನಾಡು, ನುಡಿಯನ್ನು ಪ್ರೀತಿಸುತ್ತಿದ್ದಾರೆ. ಅದಕ್ಕಾಗಿ ನಾವು ಬದುಕಿನ ಖುಷಿಯನ್ನು ಅನುಭವಿಸುತ್ತ ಬಂದಿದ್ದೇವೆ ಎಂದು ಅನುಭವದ ನುಡಿಗಳನ್ನು ಅಂದು ನುಡಿದಿದ್ದರು. ‘ಜಲವೆಂದರೆ ಬರೀ ನೀರಲ್ಲ ಅದು ಪಾವನತೀರ್ಥ..’ ಎಂಬ ಹಾಡಿನೊಂದಿಗೆ ಮಾತು ಮುಕ್ತಾಯಗೊಳಿಸಿದ್ದರು. ನಂತರದ ದಿನಗಳಲ್ಲಿ ಬನವಾಸಿಯೆಡೆಗಿನ ಆಕರ್ಷಣೆ ಮೀರಲಾಗದೆ ಎರಡು ಬಾರಿ ಬಂದಿದ್ದರು. ಆಗ ಮತ್ತದೇ ಕನ್ನಡದ ಮಾತನಾಡಿದ್ದರು ಎಂದು ಅವರ ಆತ್ಮೀಯ ಬಳಗ ಇಂದು ಸ್ಮರಿಸಿ ಕಣ್ಣೀರಾಗುತ್ತಿದೆ.