ಕುಶಾಲನಗರ: ಪಟ್ಟಣದ ಬದ್ರುನ್ನಿಸ ಲೇಔಟ್‌ನ ಪಾರ್ಕ್‌ಗೆ ಅರ್ಬನ್ ಡೆವಲಪ್‌ಮೆಂಟ್ ಪ್ರಾಜೆಕ್ಟ್ ನಿರ್ದೇಶಕ ಬಿ.ಬಸಪ್ಪ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹೇಮಂತ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಬುಧವಾರ ನಡೆದ ಕುಶಾಲನಗರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈಗಿನ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ.ಚರಣ್ ಅಕ್ರಮವಾಗಿ 20 ಸೇಂಟ್ ಪಾರ್ಕ್ ಜಾಗ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ನ ಪುರಸಭೆ ಸದಸ್ಯ ಪ್ರಮೋದ್ ಮುತ್ತಪ್ಪ ಈ ವಿಚಾರವನ್ನು ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿದ್ದನ್ನು ಸ್ಮರಿಸಬಹುದು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಡಿಕೇರಿಯಿಂದ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಿದರು. ಅಲ್ಲಿದ್ದ ಕಾಂಗ್ರೆಸ್ ಪ್ರಮುಖರಾದ ವಿ.ಪಿ.ಶಶಿಧರ್ ಮತ್ತು ಮಂಜುನಾಥ್ ಗುಂಡೂರಾವ್ ಲೇಔಟ್‌ನ ಸಂಪೂರ್ಣ ಮಾಹಿತಿಯನ್ನು ದಾಖಲೆ ಸಮೇತ ಅಧಿಕಾರಿಗಳಿಗೆ ಒದಗಿಸಿದರು. ಅಷ್ಟರಲ್ಲಿ ಎಂ.ಎಂ.ಚರಣ್ ಬಂದು ಅಧಿಕಾರಿಗಳಿಗೆ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ ತೀರ್ಮಾನ ಮಾಡುವಂತೆ ಸಲಹೆ ನೀಡಿದರು.
ಯುಡಿಪಿ ನಿರ್ದೇಶಕ ಬಸಪ್ಪ ಮಾತನಾಡಿ, ಎಷ್ಟು ವರ್ಷ ಹಳೆಯ ದಾಖಲೆ ಬೇಕಾದರೂ ನಾವು ತರಿಸಿಕೊಳ್ಳಬಲ್ಲೆ. ನಿಮ್ಮ ಸಲಹೆ ಅವಶ್ಯವಿಲ್ಲ. ನ್ಯಾಯ ಸಮ್ಮತವಾದ ವರದಿಯನ್ನು ಸರ್ಕಾರಕ್ಕೆ ಕೊಡುತ್ತೇನೆ ಎಂದು ತಿಳಿಸಿದರು. ಇಂದು ನಾವು ಭೇಟಿ ನೀಡಿ ಪ್ರಾಥಮಿಕ ಹಂತವಾಗಿ ಪರಿಶೀಲನೆಗೆ ಬಂದಿದ್ದೇವೆ. ಈಗಲೇ ಏನು ಹೇಳಲು ಸಾಧ್ಯವಿಲ್ಲ ಎಂದರು.
ಮುಖ್ಯಾಧಿಕಾರಿ ಶಿವಪ್ಪ ನಾಯಕ್, ಪುರಸಭೆ ಸದಸ್ಯ ಪ್ರಮೋದ್ ಮುತ್ತಪ್ಪ, ಶಿವಶಂಕರ್, ಬದ್ರುನ್ನಿಸ ಲೇಔಟ್‌ನ ಜಮೀಲ್, ವಸಿಮ್, ನಾಗಪ್ಪ ಬಡಾವಣೆಯ ಪಿ.ಸಂಜಯ್, ಆದರ್ಶ್, ಚೇತನ್, ಪಂಚಾಯಿತಿಯ ರಾಘವ, ಶಕೀಲ್ ಇತರರು ಹಾಜರಿದ್ದರು.