ಜಿಲ್ಲೆ

ಬದ್ಧತೆಯಿಂದ ಕೆಲಸ ಮಾಡಿ : ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ

ವಿಜಯವಾಣಿ ಸುದ್ದಿಜಾಲ ಕೋಲಾರ
ಪಾತಾಳಕ್ಕೆ ಕುಸಿದಿದ್ದ ಡಿಸಿಸಿ ಬ್ಯಾಂಕ್‌ನ್ನು ಹಗಲಿರುಳು ಶ್ರಮಿಸಿ ರಾಜ್ಯಕ್ಕೆ ಮಾದರಿಯಾಗುವಂತೆ ಮಾಡಲಾಗಿದೆ. ಈ ಪರಿಶ್ರಮವನ್ನು ವ್ಯರ್ಥ ಮಾಡಿ ಬ್ಯಾಂಕ್ ಸಂಕಷ್ಟಕ್ಕೆ ಸಿಲುಕುವಂತೆ ಮಾಡದಿರಿ ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಿಬ್ಬಂದಿಗೆ ಎಚ್ಚರಿಸಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಆನ್‌ಲೈನ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 9 ವರ್ಷಗಳ ಹಿಂದೆ ಬ್ಯಾಂಕ್ ದಿವಾಳಿಯಾಗಿ ಸಿಬ್ಬಂದಿಗೆ ಸಂಬಳ ನೀಡಲು ಸಂಕಷ್ಟಕ್ಕೆ ಸಿಲುಕಿದ್ದನ್ನು ಯಾರೂ ಮರೆಯಬಾರದು. ಮತ್ತೆ ಇಂತಹ ವಿಷಮ ಪರಿಸ್ಥಿತಿಗೆ ಬ್ಯಾಂಕ್ ಸಿಲುಕುವುದಕ್ಕೆ ನೀವು ಕಾರಣರಾಗದಿರಿ ಎಂದು ಕಿವಿಮಾತು ಹೇಳಿದರು.
ನಿರ್ದೇಶಕ ಕೆ.ವಿ.ದಯಾನಂದ್, ಎಜಿಎಂಗಳಾದ ಎಂ.ಆರ್. ಶಿವಕುಮಾರ್, ಖಲೀಮುಲ್ಲಾ, ಹುಸೇನ್ ದೊಡ್ಡಮುನಿ, ಅರುಣ್‌ಪ್ರಸಾದ್, ಪದ್ಮಮ್ಮ, ಹ್ಯಾರೀಸ್, ಅಮ್ಜದ್, ನವೀನ್ ಬೇಬಿ ಶಾಮಿಲಿ, ಮಮತಾ, ಅಮರೇಶ್ ಇದ್ದರು.

ಸರ್ಕಾರದಿಂದ ಅನುದಾನ ಇಲ್ಲ: ಬ್ಯಾಂಕಿಗೆ ಸರ್ಕಾರದಿಂದ ಅನುದಾನ ಬರುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಸರ್ಕಾರದಿಂದ ಬ್ಯಾಂಕ್‌ಗೆ ನಯಾಪೈಸೆಯೂ ಅನುದಾನ ಬರುವುದಿಲ್ಲ. ನಾವೇ ಹೂಡಿಕೆಯನ್ನು ಹೆಚ್ಚಿಸಿ ಬಡವರು, ರೈತರು, ಮಹಿಳೆಯರ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ ಎಂದು ಗೋವಿಂದಗೌಡ ಹೇಳಿದರು.


ಭದ್ರತೆ ರಹಿತವಾಗಿ ಸಾಲ: ಡಿಸಿಸಿ ಬ್ಯಾಂಕ್ ಒಂದು ಸಹಕಾರಿ ಸಂಸ್ಥೆಯಾಗಿದ್ದು, ರೈತ, ಮಹಿಳೆ, ಬಡವರಿಗೆ ನೆರವಾಗುವ ಉದ್ದೇಶ ಹೊಂದಿದೆ. ಶ್ರೀಮಂತ ವ್ಯಾಪಾರಸ್ಥರಿಗೆ ವಾಣಿಜ್ಯ ಬ್ಯಾಂಕ್‌ಗಳು ಸಾಲ ನೀಡುತ್ತವೆ. ಆದರೆ ನಾವು ಬಡ ರೈತರು, ಮಹಿಳೆಯರಿಗೆ ಭದ್ರತೆ ರಹಿತವಾಗಿ ಸಾಲ ನೀಡಿದ್ದೇವೆ ಎಂಬುದು ನಮ್ಮ ಹೆಗ್ಗಳಿಕೆ ಎಂದು ಗೋವಿಂದಗೌಡ ಹೇಳಿದರು.

8 ಲಕ್ಷ ಕುಟುಂಬಗಳಿಗೆ ಸಾಲ ಸೌಲಭ್ಯ : ಕಳೆದ 9 ವರ್ಷಗಳಲ್ಲಿ ನಾವು ಮಾಡಿರುವ ಸಾಧನೆ ಸಾಮಾನ್ಯವಾದುದಲ್ಲ. ಅವಿಭಜಿತ ಜಿಲ್ಲೆಯ 8 ಲಕ್ಷ ಕುಟುಂಬಗಳಿಗೆ ಸಾಲಸೌಲಭ್ಯ ಒದಗಿಸಲಾಗಿದೆ. ಸಾಲ ನೀಡುವಾಗ ಜಾತಿ, ಧರ್ಮ, ಪಕ್ಷ ನೋಡಿಲ್ಲ. ನಾವು ಆಡಳಿತ ಮಂಡಳಿಯ ಅಧಿಕಾರ ವಹಿಸಿಕೊಂಡಾಗ ಎಷ್ಟೋ ಜನ ಲೇವಡಿ ಮಾಡಿದ್ದರು. ದಿವಾಳಿಯಾದ ಸಂಸ್ಥೆಗೆ ವಾರಸುದಾರ ಎಂದೆಲ್ಲ ಹಾಸ್ಯ ಮಾಡಿದ್ದರು. ಈ ಎಲ್ಲ ಟೀಕೆಗಳು, ಆರೋಪಗಳನ್ನು ಸಹಿಸಿಕೊಂಡು ಬ್ಯಾಂಕ್ ಮುನ್ನಡೆಸಿದ್ದೇವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ಸಾಲ ವಸೂಲಿ ಮುಖ್ಯ: ಕೆಲವು ಸಿಬ್ಬಂದಿಯ ಮೈಚಳಿ ಇನ್ನೂ ಬಿಟ್ಟಿಲ್ಲ. ಸಾಲ ನೀಡುವುದು ಮಾತ್ರವಲ್ಲ, ವಸೂಲಿ, ಠೇವಣಿ ಸಂಗ್ರಹವೂ ಮುಖ್ಯ ಎಂಬುದನ್ನು ಮರೆಯದಿರಿ. ಬ್ಯಾಂಕ್ ಉಳಿಸುವಲ್ಲಿ ನಿಮ್ಮ ಶ್ರದ್ಧೆ ನಿರೀಕ್ಷಿತ ಮಟ್ಟದಲ್ಲಿ ಕಾಣುತ್ತಿಲ್ಲ. ಇದನ್ನು ಸರಿಪಡಿಸಿಕೊಂಡು ಸಾಗದಿದ್ದರೆ ನೀವೇ ಕಷ್ಟಕ್ಕೆ ಸಿಲುಕುತ್ತೀರಿ ಎಂದು ಗೋವಿಂದಗೌಡ ಎಚ್ಚರಿಸಿದರು.

ಸಿಬ್ಬಂದಿಗೆ ತರಾಟೆ: ಠೇವಣಿ ಸಂಗ್ರಹ, ಸಾಲ ವಸೂಲಿಯಲ್ಲಿ ಹಿನ್ನಡೆ ಅನುಭವಿಸಿರುವ ವಿವಿಧ ಶಾಖೆಗಳ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಅನ್ನ ನೀಡುವ ಸಂಸ್ಥೆಯ ಋಣ ತೀರಿಸಿ ಎಂದು ಸೂಚಿಸಿದರು. ಸಹಕಾರಿ ಬ್ಯಾಂಕ್‌ನ ಮೂಲಕ ಸರ್ಕಾರ ನೀಡುವ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದೇವೆ ಎಂಬ ಆತ್ಮತೃಪ್ತಿ ಇದೆ. ಈ ಗೌರವ ಉಳಿಸಿಕೊಂಡು ಹೋಗಿ ಎಂದರು.

ಬ್ಯಾಂಕ್ ಸಿಬ್ಬಂದಿಯು ಗ್ರಾಹಕರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು. ಠೇವಣಿ ಸಂಗ್ರಹಕ್ಕೆ ಒತ್ತು ನೀಡಿ, ಆರ್ಥಿಕ ವರ್ಷದ ಅಂತ್ಯ ಸಮೀಪಿಸುತ್ತಿದ್ದು, ಈ ಬಾರಿಯೂ ಎನ್‌ಪಿಎ ಕಡಿಮೆ ಮಾಡುವಲ್ಲಿ ನಿಮ್ಮ ಪಾತ್ರ ದೊಡ್ಡದಿರಬೇಕು.
ಕೆ.ವಿ.ದಯಾನಂದ್ ನಿರ್ದೇಶಕ , ಡಿಸಿಸಿ ಬ್ಯಾಂಕ್