ಜಿಲ್ಲೆ

ಬದುಕುವುದನ್ನು ಕಲಿಸಿಕೊಡುವುದೇ ಶಿಕ್ಷಣ

ಕೊಡೇಕಲ್ : ಅಕ್ಷರ ಜ್ಞಾನದ ಜತೆಗೆ ಸಮಾಜದಲ್ಲಿ ಬದುಕುವ ಕಲೆ ಮತ್ತು ಕೌಶಲ ಕಲಿಸಿಕೊಡುವುದೇ ಶಿಕ್ಷಣ ಎಂದು ಮಾಜಿ ಸಚಿವ ನರಸಿಂಹನಾಯಕ(ರಾಜುಗೌಡ) ಹೇಳಿದರು.

ಇಲ್ಲಿನ ಜನಕ ಕಲಾ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಸಂಸ್ಕಾರದ ಜತೆಗೆ ಶಿಕ್ಷಣ ಪಡೆಯಬೇಕು. ಕೇವಲ ಹೆಚ್ಚಿನ ಅಂಕಗಳಿಗಾಗಿ ಪದವಿ ಪೂರ್ಣಗೊಳಿಸಿದರೆ ಸಾಕು ಎಂಬ ಭಾವನೆ ನಿಮ್ಮ ಮನಸ್ಸಿನಿಂದ ತೆಗೆದು ಹಾಕಿ ಎಂದರು.

ವಿದ್ಯಾರ್ಥಿ ಜೀವನದಲ್ಲಿ ಪದವಿ ಮುಖ್ಯವಾದ ಘಟ್ಟ. ಇದನ್ನು ಸರಿಯಾದ ರೀತಿ ಬಳಸಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮಗೆ ಸಿಕ್ಕ ಅವಕಾಶ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಶ್ರೀ ರಾಮಲಿಂಗೇಶ್ವರ ಆಶ್ರಮದ ಶ್ರೀ ಮರಿಹುಚ್ಚೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಪನ್ಯಾಸಕಿ ಬಸಮ್ಮ ಗಿರಡಿಮನಿ ವಿಶೇಷ ಉಪನ್ಯಾಸ ನೀಡಿದರು.ಪ್ರಾಚಾರ್ಯ ಸೋಮಶೇಖರ, ಬಸವಂತ್ರಾಯ ಮೇಟಿ, ದಯಾನಂದ ಹಿರೇಮಠ, ಸಂಗೀತಾ ಇತರರಿದ್ದರು.
ಉಪನ್ಯಾಸಕ ನಾಗರಾಜ ಪಾಟೀಲ್ ನಿರೂಪಣೆ ಮಾಡಿದರು. ಶಶಿಕುಮಾರ ಪತ್ತಾರ ಸ್ವಾಗತಿಸಿದರು. ಸಂದೀಪ ವಂದಿಸಿದರು.