ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ತಿಂಗಳ ಅನುಭವ ಮಂಟಪ-೧ ಹಾಗೂ ಶಿವಯೋಗಿ ಸಿದ್ಧರಾಮೇಶ್ವರ ಮತ್ತು ಅಂಬಿಗರ ಚೌಡಯ್ಯನವರ ಜಯಂತಿಯನ್ನು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ಉದ್ಘಾಟಿಸಿದರು. ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಶಿವಾನಂದ ಸ್ವಾಮೀಜಿ, ಡಾ.ಸೋಮನಾಥ ಯಾಳವಾರ ಇತರರಿದ್ದರು. 
ಜಿಲ್ಲೆ

ಬದುಕುವ ವಿಧಾನ ಕಲಿಸಿದ ಶರಣರು

ಬಸವಕಲ್ಯಾಣ: ಬದುಕಿನ ಉತ್ತಮ ವಿಧಾನವನ್ನು ನಮಗೆ ಶರಣರು ಕಲಿಸಿದ್ದಾರೆ. ಮನುಷ್ಯನ ಬದುಕು ಸುಂದರ ಗೊಳಿಸುವ ಸುಖಿ ಜೀವನದ ಮೌಲ್ಯಗಳನ್ನು ಶರಣರು ವಚನಗಳ ಮೂಲಕ ನೀಡಿದ್ದಾರೆ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಅನುಭವ ಮಂಟಪದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ತಿಂಗಳ ಅನುಭವ ಮಂಟಪ-೧ ಹಾಗೂ ಶಿವಯೋಗಿ ಸಿದ್ಧರಾಮೇಶ್ವರ ಮತ್ತು ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ದಯೆ, ಕರುಣೆ, ಪ್ರೀತಿ, ಕಾಯಕ, ಭಕ್ತಿ, ದಾಸೋಹ, ಸಮಾನತೆ ಈ ಮೌಲ್ಯಗಳನ್ನು ನಾವು ಅಳವಡಿಸಿಕೊಂಡರೆ ನಮ್ಮ ಬದುಕು ಸುಂದರವಾಗುತ್ತದೆ ಎಂದರು.

ಶಿವಯೋಗಿ ಸಿದ್ಧರಾಮೇಶ್ವರರು, ಅಂಬಿಗರ ಚೌಡಯ್ಯನವರು ನಮಗೆ ಮೌಲ್ಯಯುತ ಜೀವನದ ಮಾರ್ಗವನ್ನು ವಚನಗಳ ಮೂಲಕ ತೋರಿಸಿದ್ದಾರೆ. ಸಿದ್ಧರಾಮೇಶ್ವರರು ಕಾಯಕ ಮತ್ತು ಯೋಗದಲ್ಲಿ ಪ್ರವೀಣಕರಾಗಿದ್ದರು. ಅವರು ಹೃದಯ ತುಂಬ ಬಸವಭಕ್ತಿ ತುಂಬಿಕೊಂಡಿದ್ದರು. ಅಂಬಿಗರ ಚೌಡಯ್ಯನವರು ತಮ್ಮ ಗಣಾಚಾರದ ಮೂಲಕ ಸಮಸಮಾಜದ ನಿರ್ಮಾಣಕ್ಕಾಗಿ ದುಡಿದ ಶರಣರು. ಅವರ ಬದುಕಿನ ಮೌಲ್ಯಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ನರಸೀಪುರನ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಪೀಠಾಧ್ಯಕ್ಷ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಚೌಡಯ್ಯನವರ ಜೀವನ ದರ್ಶನವನ್ನು ಮಾಡಿಸಿದರು. ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಅಂಬಿಗರ ಚೌಡಯ್ಯನವರ ಹಾಗೂ ಮಡಿವಾಳ ಮಾಚೀದೇವರ ಕೊಡುಗೆ ದೊಡ್ಡದು ಎಂದು ಬಣ್ಣಿಸಿದರು.

ನೇತೃತ್ವ ವಹಿಸಿದ್ದ ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಅನುಭವ ಮಂಟಪದಲ್ಲಿ ಪ್ರತಿ ತಿಂಗಳು ನಡೆಯುವ ಅನುಭವ ಮಂಟಪ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿ, ಶರಣರ ತತ್ವ-ಸಂದೇಶಗಳನ್ನು ಮನೆ-ಮನಗಳಿಗೆ ತಲುಪಿಸುವುದೇ ಕಾರ್ಯಕ್ರಮದ ಆಶಯವಾಗಿದೆ ಎಂದರು.

ಹುಮನಾಬಾದ್‌ನ ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ ಅನುಭಾವ ಮಂಡಿಸಿ, ಸಿದ್ಧೇರಾಮೇಶ್ವರರು ಬಸವಣ್ಣನವರನ್ನು ಮನಸ್ಸು ಮತ್ತು ಭಾವದಲ್ಲಿ ತುಂಬಿಕೊಂಡು ಅನೇಕ ರೀತಿಯಲ್ಲಿ ಹಾಡಿ ಹೊಗಳಿದ್ದಾರೆ. ಬಸವಣ್ಣನವರ ವ್ಯಕ್ತಿತ್ವ ಕಟ್ಟಲು ಬೇರೆಯವರಿಗೆ ಸಾಧ್ಯವಾಗಲಿಲ್ಲ. ಅಷ್ಟೊಂದು ಪರಿಪೂರ್ಣವಾಗಿ ಸಿದ್ಧರಾಮೇಶ್ವರರು ಬಸವಣ್ಣನವರ ಸಮಗ್ರ ಘನ ವ್ಯಕ್ತಿತ್ವವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಶರಣರ ವಚನಗಳನ್ನು ಹೇಳಿ ವಚನದ ಮಹತ್ವ ತಿಳಿಸಿದರು.

ಪ್ರಮುಖರಾದ ಮಾಣಿಕರಾವ ವಾಡೇಕರ್, ಶಾಂತಾರಾಮ ರಾಜೋಳೆ ಇತರರಿದ್ದರು.

ಆಸ್ಟ್ರೇಲಿಯಾದಿಂದ ಆಗಮಿಸಿದ ವೀರೇಶ ಹಿರೇಮಠ ವಚನ ಗಾಯನ ಮಾಡಿ ತಮ್ಮ ಅನುಭವ ಹಂಚಿಕೊಂಡರು. ರಾಜು ಜುಬರೆ ಸ್ವಾಗತಿಸಿದರು. ವೀರಣ್ಣ ಕುಂಬಾರ ನಿರೂಪಣೆ ಮಾಡಿದರು. ಶರಣೆ ವಿದ್ಯಾವತಿ ವಿಶ್ವನಾಥ ಸಜ್ಜನಶಟ್ಟಿ ಪ್ರಸಾದ ದಾಸೋಹ ಮಾಡಿದರು. ನಗರಸಭೆ ನೂತನ ಅಧ್ಯಕ್ಷ ಎಂ.ಡಿ.ಶಬೀರೋದ್ದಿನ್ ಮತ್ತು ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಫುಲೆ ಅವರನ್ನು ಸನ್ಮಾನಿಸಲಾಯಿತು.

ತ್ರಿಪುರಾಂತ ಕರೆಯಲ್ಲಿ ಚೌಡಯ್ಯನವರ ಕಾಯಕ ಸ್ಥಳ: ಸರ್ವರಿಗೂ ಸಮಬಾಳು, ಸಮಪಾಲು ಸಿದ್ಧಾಂತದ ಅಡಿಯಲ್ಲಿ ಸಮಾನತೆ ಕ್ರಾಂತಿ ನಡೆದ ಪವಿತ್ರ ನೆಲ ಕಲ್ಯಾಣ. ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ನಿಜಶರಣ ಆಂಬಿಗರ ಚೌಡಯ್ಯನವರು ಅಂದು ಕಲ್ಯಾಣದ ಅನುಭವ ಮಂಟಪಕ್ಕೆ ಬಂದವರು. ಇಲ್ಲಿನ ತ್ರಿಪುರಾಂತ ಕರೆಯಲ್ಲಿ ದೋಣಿ ನಡೆಸುವ ಕಾಯಕ ಮಾಡಿದ್ದಾರೆ ಎಂದು ನರಸೀಪುರನ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ಹೇಳಿದರು. ೧೨ನೇ ಶತಮಾನದಲ್ಲಿ ತ್ರಿಪುರಾಂತ ಕೆರೆ ಎರಡು ಮೂರು ಸಾವಿರ ಎಕರೆ ಪ್ರದೇಶದಲ್ಲಿ ವ್ಯಾಪಿಸಿತ್ತು. ಈಗ ಇದು ಸಣ್ಣದಾಗಿದೆ. ಆಗಿನ ಕೆರೆ ಈಗ ಉಳಿದಿಲ್ಲ. ಅಂದು ಕಲ್ಯಾಣಕ್ಕೆ ಶರಣರು ಬರಬೇಕೇಕಾದರೆ ಕರೆಯಲ್ಲಿ ಚೌಡಯ್ಯನವರ ದೋಣೆಯಲ್ಲಿಯೇ ಬರಬೇಕಿತ್ತು. ಈ ಕೆರೆಯ ಬಗ್ಗೆ ಚೌಡಯ್ಯನವರು ಸಾಕಷ್ಟು ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.