ಜಿಲ್ಲೆ

ಬದುಕು ಹಸನು ಮಾಡಿದ ಹಂದಿ ಸಾಕಣೆ, ವಾರ್ಷಿಕ ಲಕ್ಷಾಂತರ ಆದಾಯ ಸ್ವಯಂ ಉದ್ಯೋಗದಿಂದ ಸ್ವಾವಲಂಬಿ ಬದುಕು

ನವೀನ್ ಚಂದ್ರ ಶೆಟ್ಟಿ ಆನೇಕಲ್

ಹಂದಿ ಸಾಕಣೆ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಜತೆಗೆ ವಾರ್ಷಿಕ ಲಕ್ಷಾಂತರ ರೂ. ಆದಾಯ ಗಳಿಸಲು ಸಾಧ್ಯ ಎಂಬುದನ್ನು ತಾಲೂಕಿನ ಬೊಮ್ಮಂಡಹಳ್ಳಿ ಯುವ ರೈತ ದೇವರಾಜ್ ಸಾಧಿಸಿ ತೋರಿಸಿದ್ದಾರೆ.

ಅರ್ಧ ಎಕರೆ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು 400ಕ್ಕೂ ಹೆಚ್ಚು ಹಂದಿಗಳ ಸಾಕಣೆ ಮಾಡುತ್ತಿದ್ದಾರೆ. ಐದು ವರ್ಷಗಳ ಹಿಂದೆ ಐಟಿಐ ಮುಗಿಸಿದ್ದ ದೇವರಾಜ್, ಸ್ವಂತ ಜಮೀನಿನಲ್ಲಿ ಹಂದಿ ಸಾಕಲು ಪ್ರಾರಂಭಿಸಿದ್ದರು. ಬಳಿಕ ಕುಟುಂಬಸ್ಥರ ನೆರವಿನಿಂದ ಈ ಪ್ರಮಾಣ ಹೆಚ್ಚಿಸಿ, ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಹೆಣ್ಣು ಹಂದಿ ಗರ್ಭ ಧರಿಸಿದ ಎರಡು ತಿಂಗಳಲ್ಲಿ ಕನಿಷ್ಠ 10 ರಿಂದ 15 ಮರಿ ಹಾಕುತ್ತದೆ. ಈ ಪೈಕಿ ಹೆಚ್ಚು ಮರಿಗಳನ್ನು ಉಳಿಸಿಕೊಳ್ಳಬೇಕು. ಕೆಲವೊಮ್ಮೆ ತಾಯಿ ಹಂದಿಯ ತುಳಿತ ಹಾಗೂ ಮಲಗುವಾಗ ಸಿಕ್ಕಿ ಹಾಕಿಕೊಂಡು ಸಾವನ್ನಪ್ಪುವುದು ಸಾಮಾನ್ಯ.

ಎರಡು ತಿಂಗಳ ಬಳಿಕ ಮರಿಗಳು ಮೇವು ತಿನ್ನಲು ಪ್ರಾರಂಭಿಸುತ್ತವೆ. ಮೂರು ತಿಂಗಳ ಬಳಿಕ ತಾಯಿಯಿಂದ ಬೇರ್ಪಡಿಸಿ ಸಾಕಬಹುದು. ಒಂದು ಮರಿ 8 ತಿಂಗಳಿಗೆ 100 ರಿಂದ 120 ಕೆಜಿ ತೂಕ ಬರುತ್ತದೆ. ಸದ್ಯ ಹಂದಿ ಮಾಂಸ ಪ್ರತಿ ಕೆಜಿಗೆ ಮಾರುಕಟ್ಟೆಯಲ್ಲಿ 120 ರೂಪಾಯಿಗೆ ಮಾರಾಟವಾಗುತ್ತಿದೆ. 8 ತಿಂಗಳಿಗೆ ಒಂದು ಹಂದಿ ಸಾಕಲು ನಾಲ್ಕರಿಂದ ನಾಲ್ಕೂವರೆ ಸಾವಿರ ರೂಪಾಯಿ ಖರ್ಚು ಬರುತ್ತಿದೆ. ಆದಾಯವೂ ಉತ್ತಮವಾಗಿದೆ.

ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರತಿದಿನ ಶೆಡ್ ಹಾಗೂ ಹಂದಿಗಳನ್ನು ತೊಳೆಯಬೇಕು. ಇದಕ್ಕಾಗಿ ಕೊಳವೆಬಾವಿ ತೆಗೆಸಲಾಗಿದೆ. ಕುಟುಂಬಸ್ಥರ ಸಹಕಾರದಿಂದ ಸಾಕಣೆ ಲಾಭದಾಯಕವಾಗಿದೆ ಎನ್ನುತ್ತಾರೆ ದೇವರಾಜ್.

ಹಂದಿ ಮಾಂಸಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು, ಕೇರಳ, ನಾಗಾಲ್ಯಾಂಡ್, ಮಡಿಕೇರಿ, ಮಂಗಳೂರು ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತದೆ. ಇದಕ್ಕೆ ಖರೀದಿದಾರರು ಇಲ್ಲಿಗೆ ಬಂದು ಖರೀದಿಸುವುದರಿಂದ ಸಾಗಾಟ ವೆಚ್ಚ ಕೂಡ ಉಳಿಯುತ್ತಿದೆ ಎಂದು ತಿಳಿಸುತ್ತಾರೆ ದೇವರಾಜ್.

ಗಂಡು ಹಂದಿಯಿಂದ ಲಾಭ: ಗಂಡು ಹಂದಿಯನ್ನು ಉತ್ತಮವಾಗಿ ಬೆಳೆಸಿದರೆ ಅಂತಹ ಹಂದಿಗಳನ್ನು ಸಾಕಣೆ ಮಾಡುತ್ತಿರುವವರು ಬ್ರೀಡ್ ಮಾಡಲು ಖರೀದಿಸುತ್ತಾರೆ. ಒಂದು ಗಂಡು ಹಂದಿ 20 ಸಾವಿರ ರೂಪಾಯಿವರೆಗೆ ಮಾರಾಟವಾಗುತ್ತದೆ. ಜತೆಗೆ ಶೆಡ್‌ನಲ್ಲಿನ ಇತರರ ಹಂದಿಗಳಿಗೂ ಬ್ರೀಡ್ ಮಾಡುವುದರಿಂದ ಹೆಚ್ಚು ಮರಿ ಪಡೆಯಲು ಸಾಧ್ಯ.

ಆರೋಗ್ಯದತ್ತ ಕಾಳಜಿ ಅಗತ್ಯ: ಬೇಸಿಗೆಯಲ್ಲಿ ಹಂದಿಗಳಿಗೆ ಪಕ್ಕೆ ಜ್ವರ ಬರುವ ಸಾಧ್ಯತೆ ಹೆಚ್ಚು. ಯಾವ ಹಂದಿಗೆ ಜ್ವರ ಬಂದಿದೆ ಎನ್ನುವುದನ್ನು ಗಮನಿಸಿ, ಸೂಕ್ತ ಚಿಕಿತ್ಸೆ ಕೊಡಿಸಬೇಕು. ಬೇಸಿಗೆಯಲ್ಲಿ ಹೆಚ್ಚಾಗಿ ತರಕಾರಿ, ಹಣ್ಣಿನ ತ್ಯಾಜ್ಯ ನೀಡುವುದು ಸೂಕ್ತ. ಹಂದಿ ಗೊಬ್ಬರಕ್ಕೂ ಉತ್ತಮ ಬೇಡಿಕೆ ಇದ್ದು, ಒಂದು ಟ್ರ್ಯಾಕ್ಟರ್‌ಗೆ ಮೂರರಿಂದ ಮೂರೂವರೆ ಸಾವಿರ ರೂಪಾಯಿಗಳಿಗೆ ಮಾರಾಟವಾಗುತ್ತದೆ.

ಕೃಷಿ ಮೂಲಕ ಸಾಧನೆ ಮಾಡುವ ಆಸಕ್ತಿ ಹೊಂದಿದ್ದೆ. ಹಂದಿ ಸಾಕಣೆ ಮಾಹಿತಿ ಸಂಗ್ರಹಿಸಿ, ಐದು ವರ್ಷಗಳಿಂದ ಹಂದಿ ಸಾಕುತ್ತಿದ್ದು, ಉತ್ತಮ ಆದಾಯ ಬರುತ್ತಿದೆ. ದೇವರಾಜ್, ಹಂದಿ ಸಾಕಣೆದಾರ