ಜಿಲ್ಲೆ

ಬದುಕು ರೂಪಿಸಿಕೊಳ್ಳುವ ಅರಿವಿರಲಿ

ಮಂಡ್ಯ: ಹಣ ಕೊಟ್ಟು ಕೊಳ್ಳುವ ವಸ್ತುಗಳಿಗಿಂತ ಹಣದಿಂದ ಖರೀದಿಸಲಾಗದ ವಸ್ತುಗಳು ಮನಸ್ಸಿಗೆ ಹೆಚ್ಚು ಸಂತೋಷ ನೀಡುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು.

ತಾಲೂಕಿನ ಡಿಎಂಎಸ್ ಜ್ಞಾನ ಕುಟೀರ ಶಾಲೆ ಆವರಣದಲ್ಲಿ ದುರ್ದಂಡೇಶ್ವರ ಮಹಂತ ಶಿವಯೋಗಿಗಳ ಮಠದ ಮರಿದೇವರು ಶಿವಯೋಗಿಗಳ 15ನೇ ವರ್ಷದ ಪುಣ್ಯ ಸ್ಮರಣೆ ಹಾಗೂ 7ನೇ ವರ್ಷದ ಮಹಾ ರಥೋತ್ಸವ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಹಾಗೂ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಹಣದಿಂದ ಐಷಾರಾಮಿ ಕಾರು, ಬಂಗಲೆ ಎಲ್ಲವೂ ಖರೀದಿಸಬಹುದು. ಆದರೆ ಸಂಬಂಧ, ಸ್ನೇಹ, ಆರೋಗ್ಯ, ನಗು ಯಾವುದನ್ನೂ ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಹಣದ ಹಿಂದೆ ಹೋಗದೆ ಮೌಲ್ಯದ ಹಿಂದೆ ಹೋಗಬೇಕು ಎಂದು ಸಲಹೆ ನೀಡಿದರು.


ಆರೋಗ್ಯದ ಸಮಸ್ಯೆಗಳಿಗೆ ಮುಖ್ಯ ಕಾರಣ ಆಹಾರ ಪದ್ಧತಿ. ನಾವು ಮನಸ್ಸಿಗೆ ಇಷ್ಟವಾದ ಆಹಾರ ಸೇವಿಸುತ್ತೇವೆ, ದೇಹಕ್ಕೆ ಅಗತ್ಯವಿರುವ ಆಹಾರ ಸೇವಿಸುತ್ತಿಲ್ಲ. ನಮ್ಮ ಆಹಾರ ಪದ್ಧತಿ ಬದಲಾಗಬೇಕು. ಬದುಕನ್ನು ನಿರ್ಮಾಣ ಮಾಡಿಕೊಳ್ಳುವುದು ಆಥವಾ ನಿರ್ನಾಮ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಉತ್ತಮವಾಗಿಲ್ಲ. ಎಷ್ಟೇ ಮೊತ್ತದ ವಿಮೆ ಮಾಡಿಸಿದರೂ ಪ್ರಯೋಜನವಿಲ್ಲ. ಆರೋಗ್ಯಕ್ಕೆ ಗ್ಯಾರಂಟಿ ಕೊಡುವುದು ಆತ್ಮಸಾಕ್ಷಿ ಮಾತ್ರ. ದೇಹದ ಶುಚಿತ್ವಕ್ಕಿಂತ ಮನಸ್ಸಿನ ಶುಚಿತ್ವ ಮುಖ್ಯ. ಬದುಕು ಕೊಟ್ಟಿರುವ ದೇವರು ಮತ್ತು ನಮ್ಮ ನಡುವೆ ಯಾವುದೇ ಒಪ್ಪಂದ ಆಗಿಲ್ಲ. ಬದುಕನ್ನು ಯಾವ ರೀತಿ ರೂಪಿಸಿಕೊಳ್ಳಬೇಕು ಎಂಬ ಅರಿವು ಇರಬೇಕು ಎಂದರು.

ತ್ರಿನೇತ್ರ ಮಹಂತ ಸ್ವಾಮೀಜಿ ಅವರನ್ನು ವ್ಯಕ್ತಿಯಾಗಿ ನೋಡಬಾರದು ಶಕ್ತಿಯಾಗಿ ನೋಡಬೇಕು. ಸ್ವಾಮೀಜಿಗೆ ಶಕ್ತಿ ಇದೆ. ಗ್ರಾಮೀಣ ಜನರ ಮೇಲಿನ ಕಾಳಜಿಯಿಂದ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವವರು ಬಹಳ ವಿರಳ. ಮನಸ್ಸಿನಲ್ಲಿ ಆರೋಗ್ಯಕರ ಚಿಂತನೆ ಇರುವವರು ಮಾತ್ರ ಸಮಾಜ ಆರೋಗ್ಯಕರವಾಗಿರಬೇಕೆಂದು ಬಯಸುತ್ತಾರೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು ಮಾತನಾಡಿ, ಬೇಬಿ ಗ್ರಾಮದಂತಹ ಸಣ್ಣ ಗ್ರಾಮಕ್ಕೆ ಪ್ರಸಿದ್ಧ ವೈದ್ಯರನ್ನು ಕರತಂದಿರುವುದು ಸಂತಸದ ವಿಷಯ. ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಕಲುಷಿತಗೊಳಿಸುತ್ತಿರುವವರ ನಡುವೆ ಸ್ವಾಮೀಜಿ ವಿಭಿನ್ನವಾಗಿ ನಿಲ್ಲುತ್ತಾರೆ. ಅವರು ಒಂದು ಕಾರ್ಯಕ್ರಮದಲ್ಲಿ ದೇವಸ್ಥಾನ ಆಮೇಲೆ ಕಟ್ಟಿ ಮೊದಲು ಮನಸ್ಸುಗಳನ್ನು ಕಟ್ಟಿಕೊಳ್ಳಿ ಎಂದು ಹೇಳಿದ್ದರು. ಗ್ರಾಮಾಂತರ ಜನರಿಗೆ ಆರೋಗ್ಯದ ಅರಿವು ಕಡಿಮೆ ಇದೆ. ಇವರಿಗೆ ಆರೋಗ್ಯದ ಅರಿವು ಮೂಡಿಸಬೇಕು ಎಂದರು.

ಶಿಬಿರದಲ್ಲಿ ರಕ್ತ ಪರೀಕ್ಷೆ, ಇಸಿಜಿ, ಹೃದ್ರೋಗ ತಪಾಸಣೆ, ಜನರಲ್ ಫಿಜಿಷಿಯನ್, ದಂತ ತಪಾಸಣೆ, ನೇತ್ರ ತಪಾಸಣೆ, ಮೂತ್ರಪಿಂಡ ತಪಾಸಣೆ ನಡೆಸುವುದರ ಜತೆಗೆ ಅಗತ್ಯ ಔಷಧಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧೆಡೆಯ ಪ್ರಸಿದ್ಧ ಆಸ್ಪತ್ರೆಯ ಸುಮಾರು 75 ತಜ್ಞ ವೈದ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ದುರ್ದಂಡೇಶ್ವರ ಮಹಂತ ಶಿವಯೋಗಿ ಮಠದ ಪೀಠಾಧ್ಯಕ್ಷ ತ್ರಿನೇತ್ರ ಮಹಂತ ಸ್ವಾಮೀಜಿ ವಹಿಸಿದ್ದರು. ಆಯುಷ್ ಇಲಾಖೆಯ ನಿವೃತ್ತ ಡಿಇಒ ಡಾ.ಎನ್.ನಾಗೇಶ್, ಜಿಎಆರ್‌ಸಿ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ, ಸುಯೋಗ್ ಆಸ್ಪತ್ರೆಯ ಯೋಗಣ್ಣ, ಆಂಜನೇಯ, ಮಧು, ಶಾಲೆಯ ಮುಖ್ಯಶಿಕ್ಷಕ ಜಗದೀಶ್ ಇತರರು ಇದ್ದರು.