ಕಿಕ್ಕೇರಿ: ಕೃಷಿ ನಂಬಿದರೆ ರೈತನ ಬದುಕು ಹಸನಾಗಲಿದೆ. ನೈಸರ್ಗಿಕ ಕೃಷಿ, ಸಮರ್ಪಕವಾಗಿ ಆಧುನಿಕ ಬೇಸಾಯ ಅನುಪಾಲನೆ ಮಾಡಿದರೆ ಭೂಮಿ ತಾಯಿ ರೈತರನ್ನು ಕೈಬಿಡುವುದಿಲ್ಲ ಎಂಬುದನ್ನು ಚೌಡೇನಹಳ್ಳಿ ಗ್ರಾಮದ ಕೃಷಿಕ ನಾರಾಯಣಸ್ವಾಮಿ ಅವರ ಬೇಸಾಯ ಪದ್ಧತಿಯೇ ಸಾಕ್ಷಿಯಾಗಿದೆ.
ಸುಮಾರು 15 ಎಕರೆ ಬರಡು ಭೂಮಿಯಲ್ಲಿ ವೈವಿಧ್ಯಮಯ ಬೆಳೆ ಬೆಳೆಯಲಾಗಿದೆ. ಮೊದಲು ಕಬ್ಬು ಬೆಳೆಯುತ್ತಿದ್ದ ಭೂಮಿ ಕ್ಷಾರರಹಿತ ರಾಸಾಯನಿಕ, ಕ್ರಿಮಿನಾಶಕವಾಗಿತ್ತು. ಬಿತ್ತಿದ ಬೆಳೆ ಮೊಳಕೆ ಹೊಡೆಯುವ ಮುನ್ನವೇ ಸಾಯುತ್ತಿತ್ತು. ಆದರೆ ಇಂದು ನೈಸರ್ಗಿಕ ಕೃಷಿ ಭೂಮಿಗೆ ಹೊಂದಿಕೊಂಡಿದೆ. ತಮ್ಮ ಜಮೀನಿನಲ್ಲಿ ತೆಂಗು, ಅಡಕೆ, ಬಾಳೆ ಪ್ರಧಾನವಾಗಿದೆ. ಜತೆಗೆ ಮಾವು, ಸಪೋಟ, ಕೋಕೋ, ಕಾಳುಮೆಣಸು, ಲವಂಗ, ದೇಸಿ ವೀಳ್ಯದೆಲೆ ಸೋಂಪಾಗಿ ಬೆಳೆಸಿದ್ದಾರೆ. ಸೀಬೆ, ಹಲಸು ಸೇರಿದಂತೆ ವಿವಿಧ ಹಣ್ಣಿನ ಗಿಡಗಳನ್ನೂ ಬೆಳೆದಿದ್ದಾರೆ.
ಮನೆಗಾಗಿ ವಿವಿಧ ತರಕಾರಿ ಬೆಳೆ ಬೆಳೆಯುತ್ತಿದ್ದು, ಅಕ್ಕಪಕ್ಕದ ರೈತರಿಗೂ ದೈನಂದಿನ ಆಹಾರಕ್ಕೆ ತರಕಾರಿ ಬೆಳೆಯಲು ಉತ್ತೇಜಿಸುತ್ತಿದ್ದಾರೆ. ಮಳೆಯಾಶ್ರಿತ ಭೂಮಿಯಲ್ಲಿ ನಾಲ್ಕೈದು ಕೊಳವೆಬಾವಿಗಳು ಇವೆ. ಬೇಸಿಗೆ ಕಾಲದಲ್ಲಿ ಅಂತರ್ಜಲ ಕೊರತೆ ನೀಗಿಸಲು ಅಲ್ಲಲ್ಲಿ ಇಂಗುಗುಂಡಿ ನಿರ್ಮಿಸಿಕೊಂಡಿದ್ದಾರೆ. ಜತೆಗೆ ಹನಿ ನೀರಾವರಿ ಪದ್ಧತಿಯು ನೀರಿನ ಬವಣೆ ನೀಗಿಸಿದೆ. ರಾಸಾಯನಿಕ ಮುಕ್ತವಾದ ಬೇಸಾಯದ ಜತೆಗೆ ಹೈನುಗಾರಿಕೆಯನ್ನೂ ಅವಲಂಬಿಸಿಕೊಂಡಿದ್ದಾರೆ. ಬೆಳಗ್ಗೆ 5ಕ್ಕೆ ಮಡದಿ ಜಯಮ್ಮ ಜತೆ ಕೃಷಿ ಚಟುವಟಿಕೆಗೆ ಇಳಿಯುತ್ತಾರೆ. ಖುಷಿಯಿಂದ ಕೃಷಿ ಚಟುವಟಿಕೆ ಮುಗಿಸಿ ವಿರಮಿಸುವುದು ರಾತ್ರಿಯೇ.
ಭೂತಾಯಿ ನಂಬಿ ಬದುಕುವ ಜೀವ ನಮ್ಮದು. ಭೂತಾಯಿ ಖುಷಿಪಟ್ಟರೆ ಬದುಕು ಬಂಗಾರ. ವೈಜ್ಞಾನಿಕ ಕೃಷಿ ಪದ್ಧತಿ ಎಂದು ರಾಸಾಯನಿಕ ಗೊಬ್ಬರ ಭೂಮಿಗೆ ಸುರಿಯುವ ಬದಲು, ಬೆವರು ಸುರಿಸಿ ದುಡಿದರೆ ಕೈತುಂಬಾ ಹಣ, ಆರೋಗ್ಯ ಎಲ್ಲವೂ ಸಿಗಲಿದೆ ಎಂಬುದು ಕುಟುಂಬದ ನಂಬಿಕೆ.
ಜಮೀನಿನಲ್ಲಿನ ತೆಂಗು, ಅಡಕೆ, ಬಾಳೆ ತ್ಯಾಜ್ಯಗಳನ್ನು ಸುಡದೆ ಜೈವಿಕ ಗೊಬ್ಬರವಾಗಿಸುತ್ತಾರೆ. ಇಡೀ ಭೂಮಿ ಬಗೆದರೆ ಸಿಗುವುದು ಸುವಾಸನೆ ಮಣ್ಣು, ಎರೆಹುಳುಗಳು. ಬೆಳೆಗೆ ಇದೇ ಬಂಗಾರ. ಕೂಲಿಯಾಳು ಅವಲಂಬನೆ ಬೇಡ. ಕಬ್ಬು ಬೆಳೆದು ಬದುಕೇ ಗಬ್ಬಾಗಿತ್ತು. ರಾಸಾಯನಿಕ ಗೊಬ್ಬರದಿಂದ ಭೂಮಿ ಬಂಜರಾಗಿತ್ತು. ಸುಭಾಷ್ ಪಾಳೇಕರ್ ಕೃಷಿ, ಶೂನ್ಯ ಬೇಸಾಯದಂತಹ ಹಲವು ನೈಸರ್ಗಿಕ ಕೃಷಿ ಅಳವಡಿಸಿಕೊಂಡು ಕಾಲಕ್ರಮೇಣ ಬರಡಾಗಿದ್ದ ಭೂಮಿ ಫಲವತ್ತಾಗಿದೆ. ಹಣ್ಣಿನ ಗಿಡಗಳನ್ನು ಆಹಾರವಾಗಿ ಅರಸಿಕೊಂಡು ಬರುವ ಪಕ್ಷಿಗಳ ಇಕ್ಕೆಯಿಂದ ಫಲವತ್ತಾದ ಗೊಬ್ಬರ ಭೂಮಿಗೆ ಸೇರುತ್ತಿದೆ.
ವರ್ಷಪೂರ್ತಿ ಇವರ ಜಮೀನು ಕೃಷಿಕರ ಅಧ್ಯಯನ ಕೇಂದ್ರವಾಗಿದೆ. ದೂರದ ಊರುಗಳಿಂದ ರೈತರು, ಯುವಕರು, ಹಲವು ಕೃಷಿ ಉಪನ್ಯಾಸಕರು ಭೇಟಿ ನೀಡುವುದುಂಟು. ಸಾವಯವ ಕೃಷಿಯಲ್ಲಿ ಖುಷಿಯಾಗಿ ಬದುಕುವ ಈ ಜೋಡಿ ಜೀವಗಳ ಕಂಡು ಸಂತಸಪಟ್ಟು ಹೋಗುವವರಿಗೆ ಕೊರತೆ ಇಲ್ಲ.
ಸಾವಯವ ಕೃಷಿಯಲ್ಲಿ ಬೆಳೆದ ಕೊಬ್ಬರಿಗೆ ಬಲು ಬೇಡಿಕೆ ಇದೆ. ಎಲ್ಲರಂತೆ ಎಳನೀರಿಗೆ ತೆಂಗು ಕಟಾವು ಮಾಡದೆ, ತೆಂಗಿನಕಾಯಿಯನ್ನು ಕೊಬ್ಬರಿ ಮಾಡಿ ಮಾರಾಟ ಮಾಡುವುದು ಇವರ ಕೃಷಿಯಲ್ಲಿನ ಗುಟ್ಟಾಗಿದೆ. ಉತ್ತಮವಾದ ತೆಂಗು, ಅಡಕೆ ಸಂಗ್ರಹಣೆ ಮಾಡಿಕೊಂಡು ತೆಂಗಿನ ಸಸಿ, ಅಡಕೆ ಸಸಿ ಮಾರಾಟ ಮಾಡುವುದು. ಗುಣಮಟ್ಟದ ಸಸಿಗಳನ್ನು ಖರೀದಿಸಿದ ರೈತನಿಗೆ ಮೋಸವಿಲ್ಲದೆ ಖುಷಿಯಾಗಿ ಬೆಳೆ ಬೆಳೆದರೆ ತನಗೆ ಸಿಗುವ ತೃಪ್ತಿ ದೇವರು ಕೊಟ್ಟ ವರಕ್ಕೆ ಶ್ರೇಷ್ಠ ಎನ್ನುತ್ತಾರೆ ನಾರಾಯಣಸ್ವಾಮಿ.