ದಾವಣಗೆರೆ : ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನಡೆದರೆ ಸಾಧಕರಾಗುವ ಜತೆಗೆ ಸಮಾಜಕ್ಕೆ ಕೊಡುಗೆಯಾಗುತ್ತೀರಿ. ದೇಶದ ಪ್ರಗತಿಯಲ್ಲಿಯೂ ನಿಮ್ಮ ಪಾಲು ಇರುತ್ತದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ನಗರದ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ, ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ, ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದರು. ಉತ್ತಮ ಶಿಕ್ಷಣ, ಹವ್ಯಾಸಗಳು, ಪಾಠಗಳ ಜತೆಗೆ ಆಟ, ಯೋಗದ ಕಡೆಗೂ ವಿದ್ಯಾರ್ಥಿನಿಯರು ಗಮನ ಹರಿಸಿ ಆರೋಗ್ಯ ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ ಎಂದರು. ನಿಮ್ಮ ಹವ್ಯಾಸಗಳಿಗೆ ಜೀವ ತುಂಬುವ ಕೆಲಸ ಆಗಬೇಕು. ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಿ, ದೊಡ್ಡ ಕನಸುಗಳನ್ನು ಕಂಡು ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು. ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರ ಪ್ರತಿಭೆ ಅನಾವರಣಗೊಳಿಸಿ ಅವರೊಂದಿಗೆ ಸಂವಾದ ಮಾಡಿದರು. ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರು ಹಾಗೂ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ 36 ವಿದ್ಯಾರ್ಥಿನಿಯರು ಪ್ರಮಾಣಪತ್ರ ಹಾಗೂ ನಗದು ಪುರಸ್ಕಾರ ಪಡೆದರು. ಕಾಲೇಜಿನ ಪ್ರಾಚಾರ್ಯ ಟಿ.ಎ. ಕುಸಗಟ್ಟಿ, ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಜಿ. ಕರಿಸಿದ್ದಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಜಿ. ಶಿವಕುಮಾರ್, ಸದಸ್ಯ ಮಂಜುನಾಥ ಪಿಸೆ, ಮಹಾನಗರ ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್, ಉಪ ಪ್ರಾಚಾರ್ಯ ಎ.ಆರ್. ಮಂಜಪ್ಪ, ಮಾಜಿ ಪುರಸಭೆ ಕಾಲೇಜಿನ ಪ್ರಾಚಾರ್ಯ ಸುರೇಶ್, ಬಿ.ಪಿ. ಮಂಜುಳಾ, ವಿದ್ಯಾರ್ಥಿ ಕಾರ್ಯದರ್ಶಿ ಮೋಕ್ಷಾ ಹಾಗೂ ಉಪನ್ಯಾಸಕರು ಇದ್ದರು. ಹಿರಿಯ ಉಪನ್ಯಾಸಕ ಬಿ. ಪಾಲಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣ ಕುಮಾರಿ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಸ್ವಾಗತಿಸಿದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.