ಶೃಂಗೇರಿಯಲ್ಲಿ ಸಾಹಿತಿ ಗಣಿತನವ ಶಿವಶಂಕರ್ ಅವರ ಮಡಿಲು ಕೃತಿ ಬಿಡುಗಡೆಗೊಳಿಸಲಾಯಿತು. ಎಚ್.ಎಸ್.ಸುಬ್ರಹ್ಮಣ್ಯ, ಪ್ರಭಾಕರ್ ಕಾರಂತ್, ಮಂಜುನಾಥ್ ಇತರರಿದ್ದರು. 
ಜಿಲ್ಲೆ

ಬದುಕಿನ ಮೌಲ್ಯ ತೆರೆದಿಡುವ ಕೃತಿಗಳಿಗೆ ಜನಮಾನಸದಲ್ಲಿ ಶಾಶ್ವತ ಸ್ಥಾನ

ಶೃಂಗೇರಿ: ಸಾಹಿತ್ಯ ಮನಮುಟ್ಟಬೇಕು. ಹೃದಯತಟ್ಟಬೇಕು. ಬುದ್ಧಿಯನ್ನು ಪ್ರೇರೇಪಿಸಬೇಕು. ಬದುಕಿನ ಮೌಲ್ಯ ತೆರೆದಿಡುವ ಕೃತಿಗಳು ಜನಮಾನಸದಲ್ಲಿ ಶಾಶ್ವತ ಸ್ಥಾನ ಗಳಿಸಲು ಸಾಧ್ಯ ಎಂದು ಶಿವಮೊಗ್ಗದ ವಾಗ್ಮಿ ಜಿ.ಎಸ್.ನಟೇಶ್ ತಿಳಿಸಿದರು.

ಚಿಂತನಾ ಬಳಗ ಹಾಗೂ ಜ್ಞಾನಭಾರತೀ ವಿದ್ಯಾ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಗಣಿತವನ ಶಿವಶಂಕರ್ ಅವರ ‘ಮಡಿಲು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಕಗ್ಗದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳು ಕುರಿತು ಮಾತನಾಡಿದರು.

ಮನುಷ್ಯ ಬದಲಾಗುತ್ತಿದ್ದಾನೆ. ರಸನಾಡಲ್ಲಿ ಕಸದ ತೊಟ್ಟಿ ತುಂಬಿ ಕಸದ ನಾಡು ಆಗುತ್ತಿದೆ. ಪ್ರಕೃತಿಯನ್ನು ನಾವು ನಾಶಮಾಡುತ್ತಿದ್ದೇವೆ. ಎಲ್ಲವನ್ನೂ ಸರ್ಕಾರ ಮಾಡುತ್ತದೆ ಎಂದು ನಾವು ಕೈಕಟ್ಟಿ ಕುಳಿತುಕೊಂಡಿದ್ದೇವೆ. ನಾವು ಹಳೆಯದನ್ನು ಮರೆತಿದ್ದೇವೆ. ಹೊಸತು ಎಂಬುದು ಇಲ್ಲಿ ಯಾವುದೂ ಇಲ್ಲ. ಪಿಜ್ಜಾದ ಬಣ್ಣಕ್ಕೆ ಮಾರುಹೋಗಿ ರಾಗಿರೊಟ್ಟಿಯನ್ನು ತಿರಸ್ಕರಿಸಿದ್ದೇವೆ. ತಂದೆ, ತಾಯಿ, ಗುರುಗಳ ಮೇಲಿನ ಭಕ್ತಿ ಕಡಿಮೆಯಾಗಿದೆ. ಕೃತಕ ಬುದ್ಧಿಮತ್ತೆಯಿಂದ ಕೃತಕ ಆಹಾರ ಸೇವಿಸಿ ಜೀವನವನ್ನು ರೂಪಿಸಿಕೊಂಡ ನಾವು ತಂತ್ರಜ್ಞಾನ ನೆಚ್ಚಿಕೊಂಡು ಸಾಗಿಸುತ್ತಿದ್ದೇವೆ. ಹಬ್ಬ ಹರಿದಿನಗಳ ಸಂಭ್ರಮ ಮರೆಯಾಗಿದೆ. ಭಕ್ತಿ ಆಡಂಬರವಾಗುತ್ತಿದೆ. ಶ್ರಮಿಕ ಸಂಸ್ಕಾರ ಮರೆಯಾಗಿದೆ. ಕುಳಿತು ಕೆಲಸ ಮಾಡುತ್ತ, ಓಡಾಡುತ್ತ ಆಹಾರ ಸೇವಿಸುವ ಪದ್ಧತಿ ರೂಢಿಗತವಾಗಿದೆ ಎಂದರು.

ಜಾನಪದ ಸಾಹಿತ್ಯ ಶಿಸ್ತನ್ನು ನಮಗೆ ಕಲಿಸಿದೆ. ಮಕ್ಕಳಿಗೆ ಸಂಸ್ಕಾರದ ಮೌಲ್ಯವನ್ನು ವಿಶ್ವವಿದ್ಯಾಲಯ ಕಲಿಸುವುದಿಲ್ಲ. ಹಿರಿಯರ ಜೀವನೋಲ್ಲಾಸ, ಸಾಂಘಿಕ ಮನೋಭಾವ, ಸಹಬಾಳ್ವೆ ದೂರವಾಗಿದ್ದು ಕೃತಕಬುದ್ಧಿಮತ್ತೆಗೆ ಹೆಚ್ಚಿನ ಒತ್ತು ನೋಡಿ ನಾವು ಎತ್ತಲೋ ಸಾಗುತ್ತಿದ್ದೇವೆ. ಕೃಷಿ ಮಾಯವಾಗುತ್ತಿದೆ. ಉನ್ನತ ಶಿಕ್ಷಣ ಪಡೆದವರಲ್ಲಿ ಹೃದಯವಂತಿಕೆ ಇರಬೇಕು. ಭೂಮಿಯ ಮೌಲ್ಯ ಅರಿಯಬೇಕು. ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನ ಬದುಕು ಪರಿಪೂರ್ಣತೆ ನೀಡುತ್ತದೆ ಎಂದರು.

ಸಾಹಿತಿ ಪ್ರಭಾಕರ್ ಕಾರಂತ್ ಮಾತನಾಡಿ, ಬರೆದಂತೆ ಬದುಕುವವರು ಇಲ್ಲ. ಹಿರಿಯ ಸಾಹಿತಿಗಳು ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನದ ಪರಿಪೂರ್ಣತೆಯ ಅರಿವಿನಲ್ಲಿ ಬದುಕು ಸಾಗಿಸಿದ್ದಾರೆ. ಉತ್ತಮ ಸಾಹಿತ್ಯ ನಮಗೆ ಪ್ರಜ್ಞಾನ ನೀಡುತ್ತದೆ. ಜೀವನದ ಅನುಭವದ ಮೌಲ್ಯಗಳು ಸಾಹಿತ್ಯದ ಪ್ರಧಾನ ಅಂಶಗಳಾಗಬೇಕು ಎಂದರು.

ಶಿವಮೊಗ್ಗ ಶಿಕ್ಷಣ ಇಲಾಖೆ ಸಹನಿರ್ದೇಶಕ ಎಚ್.ಮಂಜುನಾಥ್, ಸಿರಿಗನ್ನಡ ವೇದಿಕೆ ಅಧ್ಯಕ್ಷ ಎಚ್.ಎ.ಪ್ರಕಾಶ್, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಸಾಹಿತಿ ಗೀತಾ ಮಕ್ಕಿಮನೆ, ಜ್ಞಾನಭಾರತೀ ವಿದ್ಯಾಕೇಂದ್ರದ ಪ್ರಧಾನ ಕಾರ್ಯದರ್ಶಿ ಜಿ.ಎಂ.ಸತೀಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಜಿ.ನಾಗೇಶ್ ಇದ್ದರು.