ಕಡೂರು ಶೈಕ್ಷಣಿಕ ವಲಯದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಉದ್ಘಾಟಿಸಿದರು. ಶಾಸಕ ಕೆ.ಎಸ್.ಆನಂದ್, ಉಪಾಧ್ಯಕ್ಷೆ ಮಂಜುಳಾ ಚಂದ್ರು, ಪೂರ್ಣಿಮಾ, ಸಿ.ಆರ್. ಪ್ರವೀಣ್ ಇತರರಿದ್ದರು.  
ಜಿಲ್ಲೆ

ಬದುಕಿನ ಏಳಿಗೆಗೆ ಶಿಕ್ಷಣವೇ ಶಕ್ತಿ

ಕಡೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಶಿಕ್ಷಣವಿಲ್ಲದೆ ಬದುಕುವುದು ಕಷ್ಟವಾಗಿದ್ದು ಬದುಕಿನ ಏಳಿಗೆಗೆ ಶಿಕ್ಷಣವೇ ಶಕ್ತಿಯಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಬುಧವಾರ ಹಮ್ಮಿಕೊಂಡಿದ್ದ 64ನೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶ ಕಟ್ಟುವಲ್ಲಿ ಶಿಕ್ಷಕರದ್ದು ಅತ್ಯಂತ ಪ್ರಮುಖ ಪಾತ್ರ. ಪ್ರಬಲ ವರ್ಗವಾಗಿರುವ ನೀವು ಎಲ್ಲ ರಂಗಗಳ ಏಳಿಗೆಗೂ ಕಾರಣರಾಗಿದ್ದೀರಿ. ಹಂತ ಹಂತವಾಗಿ ಶಿಕ್ಷಣ ವ್ಯವಸ್ಥೆಯೂ ಬದಲಾಗುತ್ತಿದೆ. ಶಾಲೆ ಇಲ್ಲದ ಹಳ್ಳಿಗಳಿಲ್ಲ ಎನ್ನುವ ವಾತಾವರಣವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಕೊರತೆಯಿಂದ ಶಾಲೆಗಳು ಮುಚ್ಚುತ್ತಿರುವ, ಮಕ್ಕಳ ಕಲಿಕಾ ಗುಣಮಟ್ಟ ಕುಸಿಯುತ್ತಿರುವ ವರದಿಗಳು ಬರುತ್ತಿವೆ. ಪಾಲಕರು ಮಕ್ಕಳನ್ನು ಎಲ್ಲ ಸೌಲಭ್ಯ ಇರುವ ಸರ್ಕಾರಿ ಶಾಲೆಗಳಿಗೆ ಬದಲಾಗಿ ಖಾಸಗಿ ಶಾಲೆಗಳಿಗೆ ಸೇರಿಸುವ ಒಲವು ತೋರಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಆದ್ದರಿಂದ ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಬೇಕಾದ ಹಾಗೂ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಇದಾಗಿದೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಶಿಕ್ಷಣ ಮತ್ತು ಶಿಕ್ಷಕರಿಗೆ ಸಮಾಜದಲ್ಲಿ ಅತಿ ಹೆಚ್ಚು ಗೌರವವಿದೆ. ತಂದೆ, ತಾಯಿ ಮತ್ತು ಶಿಕ್ಷಕರು ನಮ್ಮ ಏಳಿಗೆಯ ಶಿಲ್ಪಿಗಳು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕಡೂರು ವಲಯದಲ್ಲಿ ಶಾಲೆಗಳು ಮುಚ್ಚದಿರಲು ಎಲ್ಲರೂ ಕೈಜೋಡಿಸಬೇಕು. ಪುರಸಭೆಯಿಂದ ಅಂಬೇಡ್ಕರ್ ಬಡಾವಣೆಯ ಶಾಲೆ ದತ್ತು ತೆಗೆದುಕೊಂಡು ಮೂಲಸೌಕರ್ಯ ಕಲ್ಪಿಸಲಾಗಿದೆ. ದಾನಿಗಳು ಇಂಥ ಕ್ರಮಕ್ಕೆ ಹೆಚ್ಚು ಒತ್ತು ಕೊಡಬೇಕಿದೆ ಎಂದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ. ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಸಾಂಸ್ಕೃತಿಕ ಕಲಾ ತಂಡಗಳ ಉಪಸ್ಥಿತಿಯಲ್ಲಿ ಶಿಕ್ಷಕರು ಪಟ್ಟಣದಲ್ಲಿ ಸಾರೋಟಿನ ಮೂಲಕ ಮೆರವಣಿಗೆ ಮಾಡಿದರು. ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು. ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ ಇಒ ಸಿ.ಆರ್. ಪ್ರವೀಣ್, ಬಿಇಒ ಎಂ.ಎಚ್.ತಿಮ್ಮಯ್ಯ, ಸಮನ್ವಯಾಧಿಕಾರಿ ಪ್ರೇಮ್‌ಕುಮಾರ್, ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್, ಅಕ್ಷರ ದಾಸೋಹ ಅಧಿಕಾರಿ ದೇವರಾಜ್, ಯುವಜನ ಸೇವಾ ಕ್ರೀಡಾಧಿಕಾರಿ ಮುರಳೀಧರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್, ಧನಪಾಲನಾಯ್ಕ, ಜಗದೀಶ್, ಪ್ರಶಾಂತ್‌ಕುಮಾರ್, ಪ್ರಭಾಕರ್, ನಾಗರತ್ನಾ, ಶಾರದಮ್ಮ, ಲತಾಮಣಿ ಇತರರಿದ್ದರು.