ಚಿತ್ರದುರ್ಗ: ದ.ರಾ.ಬೇಂದ್ರೆ ಅವರು ಕನ್ನಡ ಕಾವ್ಯದ ಸೊಗಸನ್ನು ಹೆಚ್ಚಿಸಿದ ಕವಿ ಎಂದು ನಗರದ ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಜೆ. ಕರಿಯಪ್ಪ ಮಾಳಿಗೆ ಹೇಳಿದರು.
ಚಿತ್ರದುರ್ಗ ತಾಲೂಕು ಜಿ.ಆರ್.ಹಳ್ಳಿಯ ಜ್ಞಾನ ಗಂಗೋತ್ರಿ ದಾವಣಗೆರೆ ವಿಶ್ವವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಧ್ಯಯನ ವಿಭಾಗ, ದ.ರಾ.ಬೇಂದ್ರೆ ಅವರ ಜನ್ಮದಿನದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ‘ಬೇಂದ್ರೆ ಅವರ ಕಾವ್ಯದ ನೆಲೆ ಗ ಳು’ ಕುರಿತ ಉಪನ್ಯಾಸ ನೀಡಿದರು.
ಪ್ರೀತಿ ಮತ್ತು ದಾಂಪತ್ಯ ಒಂದುಗೂಡಿಸಿ ಕಾವ್ಯ ಕಟ್ಟಿಕೊಟ್ಟಿರುವ ಬೇಂದ್ರೆ ಬಡತನದ ಬೇಗೆಯನ್ನೂ ಬದಿಗಿಟ್ಟು, ಒಲವೇ ನಮ್ಮ ಬ ದುಕು ಎನ್ನುವುದನ್ನು ತೋರಿದ್ದಾರೆ. ಮನುಷ್ಯರಿಗೆ ದಕ್ಕಿರುವ ವಿಶೇಷಗಳಲ್ಲಿ ಒಲವು ಪ್ರಮುಖವಾದುದೆಂದು ನಂಬಿದ್ದ ಕವಿ. ಪ್ರತಿ ವಿಷಯ ದಲ್ಲೂ ಪ್ರೀತಿಯ ಜತೆ ಅವರು ಅನುಸಂಧಾನ ಮಾಡಿದ್ದಾರೆ ಎಂದರು.
ಅವರ ಕಾವ್ಯದ ವಿಶೇಷವೆಂದರೆ ಬದುಕೇ ಕಾವ್ಯವಾಗುತ್ತಾ ಹೋಗುವ ಪವಾಡ ಸದೃಶ ಶಕ್ತಿಯಾಗಿದ್ದು, ಅವರ ಹಲವು ಕವಿತೆಗಳು ಮ ಗನ ಸಾವು, ಸಂಸಾರದ ವಿರಸ, ಬದುಕಿನ ಕಥೆ ವ್ಯಥೆಗಳಿಂದ ಮೂಡಿದವುಗಳಾಗಿವೆ. ಬದುಕಿನ ಅನನ್ಯತೆಯನ್ನು ಕಾವ್ಯವಾಗಿ ರಚಿಸಿದ ಸಹಜ ಕವಿ ಬೇಂದ್ರೆ. 27 ಕ್ಕೂ ಹೆಚ್ಚು ಕವನ ಸಂಕಲಗಳನ್ನು ರಚಿಸಿರುವ ಬೇಂದ್ರೆ ಬದುಕಿನ ಆಳ ಅಗಲಗಳನ್ನು ವೈವಿಧ್ಯಮಯವಾಗಿ ಕಟ್ಟಿ ಕೊಟ್ಟ ಮಹಾನ್ ಪ್ರತಿಭೆಯಾಗಿದ್ದಾರೆ. ರಸಋಷಿ, ವರಕವಿ ಹೀಗೆ ಬಹುವಿಧವಾಗಿ ಓದುಗರು ಗೌರವಿಸಿದ ಬೇಂದ್ರೆ ಅವರ ಸಾಹಿತ್ಯ, ಕನ್ನಡವನ್ನು ಶ್ರೀಮಂತಗೊಳಿಸಿವೆ ಎಂದರು.
ಅಧ್ಯಯನ ಕೇಂದ್ರದ ಸಂಯೋಜಕ ಡಾ.ಲೋಕೇಶ್, ಅಧ್ಯಾಪಕರಾದ ಡಾ.ಭೀಮಾಶಂಕರ್ ಜೋಶಿ, ಡಾ.ರೂಪೇಶ್, ಕಾರ್ಯಕ್ರಮದ ಸಂಯೋಜಕರಾದ ಡಾ.ಎಚ್.ಜಿ.ವಿಜಯಕುಮಾರ್, ಡಾ.ಮಹಾಂತೇಶ್ ಪಾಟೀಲ್ ಇದ್ದರು.