ಕೋಲಾರ: ವ್ಯಕ್ತಿಯ ವೈಯಕ್ತಿಕ ಬದುಕಿನ ಅಂತಃಕರಣದಿಂದ ಕವಿತೆ ಹುಟ್ಟುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ.ಜಿ.ಶಿವಪ್ಪ ಅರಿವು ಅಭಿಪ್ರಾಯಪಟ್ಟರು.
ನಗರದ ಖಾದ್ರಿಪುರದ ಸಾರಿಗೆ ಸಂಸ್ಥೆಯ ಶಿವಕುಮಾರ್ ಅವರ ಮನೆಯಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ೫೧ನೇ ಮನೆಗೊಂದು ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಮನಸ್ಸಿನ ಆಗುಹೋಗುಗಳಿಗೆ ಅನುಗುಣವಾಗಿ ಕವಿತೆ ಹುಟ್ಟುತ್ತದೆ. ವೈಯಕ್ತಿಕ ವಾತಾವರಣ ಕವಿಯನ್ನಾಗಿಸಲು ಪರಿವರ್ತಿಸುತ್ತದೆ. ಕವನ ರಚಿಸಲು ಯಾವುದೇ ರೀತಿಯ ದಿಗ್ಬಂಧನ ಇರುವುದಿಲ್ಲ. ಅವರವರ ಭಾವನೆಗಳನ್ನು ಹೊರಹೊಮ್ಮುಸುತ್ತದೆ. ಅದು ಸಂದರ್ಭ, ಸನ್ನಿವೇಶಗಳಲ್ಲಿ ಸೂಕ್ಷ್ಮವಾಗಿ ಸೂಕ್ತವಾದ ಸ್ಥಳದಲ್ಲಿ ಅದು ಹೊರಬಂದು ಒಬ್ಬ ವ್ಯಕ್ತಿಯನ್ನು ಪ್ರಬುದ್ಧನನ್ನಾಗಿಸುತ್ತದೆ ಎಂದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ನಾರಾಯಣಪ್ಪ ಮಾತಾನಾಡಿ, ಭಾರತದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೇರೆ ಯಾವ ದೇಶದಲ್ಲಿಯೂ ಕಾಣಲು ಸಾಧ್ಯವಿಲ್ಲ. ನಮ್ಮದು ಅತ್ಯಂತ ಸಮೃದ್ಧವಾದಂತಹ ದೇಶ. ಇಂತಹ ದೇಶದಲ್ಲಿ ಹುಟ್ಟಿರುವುದೇ ಭಾಗ್ಯ. ಹಾಗಾಗಿ ಮನುಷ್ಯ ಜೀವನದಲ್ಲಿ ಏನನ್ನಾದರೂ ಸಾಧಿಸಿ ಈ ನೆಲಕ್ಕೆ ಕೊಡುಗೆಯಾಗಿ ತನ್ನ ಜೀವನವನ್ನು ಪಾವನಗೊಳಿಸಿಕೊಳ್ಳಬೇಕು. ಕವಿತೆ ಬರೆಯುತ್ತಾ ಹೋದಂತೆ, ಅನುಭವ ಆದಂತೆ ಗಟ್ಟಿಯಾಗಿ ತನ್ನ ನೆಲೆಯನ್ನು ಕಂಡುಕೊಳ್ಳುತ್ತದೆ. ಆ ನಿಟ್ಟಿನಲ್ಲಿ ನಮ್ಮ ಆಲೋಚನೆಗಳು ನಮ್ಮ ಏಕಾಂತದ ಸಮಸ್ಯೆಗಳನ್ನು ಹಾಗೂ ಸಮಾಜದ ಸನ್ನಿವೇಶಗಳನ್ನು ಬದಲಾಯಿಸುವ ಶಕ್ತಿಯನ್ನು ಕವಿತೆಗೆ ದಾರಿದೀಪವಾಗುತ್ತದೆ ಎಂದರು.
ರೆಡ್ ಕ್ರಾಸ್ ರಾಜ್ಯಾಡಳಿತ ಸದಸ್ಯ ಜಿ.ಶ್ರೀನಿವಾಸ್ ಮಾತಾನಾಡಿ, ಬದುಕನ್ನು ಖುಷಿಯಿಂದ ಅನುಭವಿಸಬೇಕು. ಈ ತರಹದ ಮನೆಗೊಂದು ಕವಿಗೋಷ್ಠಿಯಿಂದ ನಮ್ಮೆಲ್ಲರ ಸಮಾಗಮ ಮತ್ತು ಬೇರೆ ಬೇರೆ ವಿಷಯಗಳ ಅನುಸಂಧಾನವಾಗುತ್ತದೆ. ಒಳ್ಳೆಯ ವಾತಾವರಣ ಮೂಡಿ ಮನುಷ್ಯನನ್ನು ದೀರ್ಘಾಯುಷ್ಯದ ಕಡೆಗೆ ಕವಿತೆ ಮತ್ತು ನಮ್ಮ ಓದು ಕರೆದುಕೊಂಡು ಹೋಗುತ್ತವೆ ಎಂದರು.
ಕವಿಗೋಷ್ಠಿಗೆ ಸ್ಥಳಾವಕಾಶ ಮಾಡಿಕೊಟ್ಟ ಶಿವಕುಮಾರ್ ದಂಪತಿಯನ್ನು ಗೌರವಿಸಲಾಯಿತು. ಕವಿಗಳಾದ ತಿಮ್ಮಸಂದ್ರ ನಾಗರಾಜ, ಸುಮಿತ್ರಾ, ಕೊ.ನಾ.ಪರಮೇಶ್ವರನ್, ಟಿ.ಸುಬ್ಬರಾಮಯ್ಯ, ಟಿ.ಎಂ.ವೆಂಕಟೇಶ್, ವೆಂಕಟರಮಣಪ್ಪ, ಗೌರಿಪೇಟೆ ಕೆ.ಎನ್. ರವೀಂದ್ರನಾಥ್, ಗೋವಿಂದರಾಜ್, ಶ್ರೀನಿವಾಸ್, ವರಂವೆಕಟೇಶಪ್ಪ, ರಮೇಶ್ ಬಾಬು, ಚಿಟ್ನಹಳ್ಳಿ ರಾಮಚಂದ್ರ, ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಪೋಸ್ಟ್ ನಾರಾಯಣಸ್ವಾಮಿ, ರವೀಂದ್ರಸಿಂಗ್, ಬಿ.ಶಿವಕುಮಾರ್ ಮುಂತಾದವರು ಕವಿತೆಗಳನ್ನು ವಾಚಿಸಿ ಕುವೆಂಪು ಬರೆದ ಶ್ರೀ ರಾಮಾಯಣ ದರ್ಶನ ಕೃತಿಯನ್ನು ಪಡೆದುಕೊಂಡರು.
ಕವಿಗಳಾದ ಡಾ. ಶರಣಪ್ಪ ಗಬ್ಬೂರು, ಹರ್ಷಿತ್ ಇತರರು ಇದ್ದರು.