- ಬೇಲೂರು: ವೃದ್ಧೆಯೊಬ್ಬರು ಬದುಕಿದ್ದರೂ ಮೃತಪಟ್ಟಿರುವುದಾಗಿ ಬೇಲೂರಿನ ತಹಸೀಲ್ದಾರ್ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರ ಪಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ವೃದ್ಧೆಯ ಮಗ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೇಲೂರು ತಾಲೂಕಿನ ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದಿಗೆರೆ ಗ್ರಾಮದ ದಿವಂಗತ ಹುಲೀಗೌಡ ಎಂಬುವರ ಪತ್ನಿ ಪಾರ್ವತಮ್ಮ ಅವರ ಮರಣ ಪ್ರಮಾಣ ಪತ್ರವನ್ನು ತಹಸೀಲ್ದಾರ್ ಕಚೇರಿ ಸಿಬ್ಬಂದಿ ನೀಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಪಾರ್ವತಮ್ಮ ಅವರ ಹೆಸರಿನಲ್ಲಿ 32 ಗುಂಟೆ ಜಮೀನು ಇದೆ. ಈ ಜಮೀನನ್ನು ತನ್ನದಾಗಿಸಿಕೊಳ್ಳುವ ಉದ್ದೇಶದಿಂದ ಪಾರ್ವತಮ್ಮ ಅವರ ಹತ್ತಿರದ ಸಂಬಂಧಿಕರೊಬ್ಬರ ಮಗ 2020ನೇ ಏಪ್ರಿಲ್ 10ರಂದು ಪಾರ್ವತಮ್ಮ ಮೃತ ಪಟ್ಟಿದ್ದಾರೆಂದು 2020ನೇ ಏಪ್ರಿಲ್ 20ರಂದು ನೋಂದಣಿ ಮಾಡಿಸಿದ್ದಾರೆ. ನಂತರ 2020ರ ಅಕ್ಟೋಬರ್ 14ರಂದು ಪಾರ್ವತಮ್ಮ ಅವರ ಹೆಸರಿನಲ್ಲಿ ಮರಣ ದೃಢೀಕರಣ ಪತ್ರವನ್ನೂ ಸಹ ಪಡೆದಿದ್ದಾರೆ.
ಮುದಿಗೆರೆ ಗ್ರಾಮದ ಪಾರ್ವತಮ್ಮ ಅವರಿಗೆ 5 ಜನ ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದು ಎಲ್ಲರಿಗೂ ಆಸ್ತಿ ವಿಭಾಗ ಮಾಡಿ ಕೊಟ್ಟಿದ್ದರು. ತಮ್ಮ ಜೀವನಾಂಶಕ್ಕೆಂದು 32 ಗುಂಟೆ ಜಮೀನನ್ನು ಅವರ ಹೆಸರಿನಲ್ಲೇ ಇಟ್ಟು ಕೊಂಡಿದ್ದರು. ಅವರು ಬೇರೆ ಗ್ರಾಮದಲ್ಲಿ ಬೇಕರಿ ವ್ಯವಹಾರ ಮಾಡಿಕೊಂಡು ಮಕ್ಕಳ ಜತೆಯಲ್ಲೆ ತೆರಳಿದ್ದರು. ಇದನ್ನೆಲ್ಲ ಅರಿತಿದ್ದ ಪಾರ್ವತಮ್ಮ ಸಂಬಂಧಿಕರ ಮಗ ಆಕೆ ಮೃತ ಪಟ್ಟಿದ್ದಾರೆಂದು ಮರಣ ದೃಢೀಕರಣ ಪತ್ರ ಪಡೆದಿರುವ ಸಂಗತಿ 10 ದಿನಗಳ ಹಿಂದಷ್ಟೇ ಪಾರ್ವತಮ್ಮ ಕುಟುಂಬದ ಸದಸ್ಯರಿಗೆ ಗೊತ್ತಾಗಿ ತಕ್ಷಣವೇ ಗ್ರಾಮಕ್ಕೆ ಆಗಮಿಸಿದ್ದಾರೆ.
ಈ ಬಗ್ಗೆ ಕುಟುಂಬ ಸದಸ್ಯರು ಬೇಲೂರಿನ ತಹಸೀಲ್ದಾರ್ ಕಚೇರಿಯಲ್ಲಿ ಪರಿಶೀಲಿಸಿದಾಗ 2020ರ ಅವಧಿಯಲ್ಲಿ ಪಾರ್ವತಮ್ಮ ಮೃತ ಪಟ್ಟಿದ್ದಾರೆಂದು ಮರಣ ದೃಢೀಕರಣ ಪತ್ರ ಪಡೆದಿರುವುದು ಬೆಳಕಿಗೆ ಬಂದಿದೆ. ಇದರಿಂದ ಆತಂಕಗೊಂಡ ಪಾರ್ವತಮ್ಮನ ಮಗ ಮಲ್ಲೇಶ್ ಮಂಗಳವಾರ (ಮೇ 23)ಬೇಲೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.