ಜಿಲ್ಲೆ

ಬದುಕಿಗೆ ಸ್ಪಂದಿಸುವ ಸಾಹಿತ್ಯ ರಚಿಸಿ

ಬೀದರ್: ಜನರ ಬದುಕಿಗೆ ಸ್ಪಂದಿಸುವ ಸಾಹಿತ್ಯ ರಚಿಸಿದಾಗ ಮಾತ್ರ ಅದು ಬಹು ಕಾಲದವರೆಗೆ ಓದುಗರ ಮನದಾಳದಲ್ಲಿ ಇರುತ್ತದೆ. ಯಾವ ಕಾರಣಕ್ಕೂ ಪ್ರಶಸ್ತಿಗಾಗಿ ಸಾಹಿತ್ಯ ರಚಿಸುವುದು ಬೇಡ ಎಂದು ಕನಕಗಿರಿಯ ಖ್ಯಾತ ಗಜಲ್ ಕವಿ ಅಲ್ಲಗಿರಿ ರಾಜ್ ಹೇಳಿದರು.

ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ನಗರದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ಬೆಳಗಾವಿಯ ಗಜಲ್ ಕವಿ ನಾಗೇಶ ಜೆ. ನಾಯಕ ಅವರ ಗರೀಬನ ಜೋಳಿಗೆ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಬೇರೆ ಬೇರೆ ಭಾಷೆ ಪ್ರಭಾವ ಮಧ್ಯೆಯೂ ಗಡಿ ನಾಡಿನಲ್ಲಿ ಕನ್ನಡ ಸಾಹಿತ್ಯ ಉಳಿದು ಬೆಳೆದು ಬಂದಿರುವುದು ಶ್ಲಾಘನೀಯ ಎಂದರು.

ಕವಿ ಸಿ.ಎಸ್. ಆನಂದ ಮಾತನಾಡಿ, ನೆಲ ಸಂಸ್ಕೃತಿಯ ಗಟ್ಟಿ ಧ್ವನಿಯಾಗಿರುವ ನಾಗೇಶ ನಾಯಕ ಅವರ ಗರೀಬನ ಜೋಳಿಗೆ ಕವನ ಸಂಕಲನದಲ್ಲಿರುವ 70 ಗಜಲ್ಗಳು ಅರ್ಥಪೂರ್ಣ ಹಾಗೂ ಮೌಲಿಕ ಚಿಂತನೆ ಒಳಗೊಂಡಿವೆ. ಜೀವಪರ, ಜನಪರ ಕಾಳಜಿಯನ್ನು ಇಲ್ಲಿ ಕಾಣಬಹುದು. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಗಜಲ್ ಗಳು ಮೂಡಿ ಬಂದಿವೆ ಎಂದು ಹೇಳಿದರು.

ಅಧ್ಯಕ್ಷತೆ ವೇದಿಕೆ ಅಧ್ಯಕ್ಷ ಡಾ.ಶಾಮರಾವ ನೆಲವಾಡೆ ವಹಿಸಿದ್ದರು. ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಜಿ.ಬಾಬುರಾವ್, ಸವದತ್ತಿಯ ಗಜಲ್ ಕವಿ ನಾಗೇಶ ನಾಯಕ, ವೇದಿಕೆ ಗೌರವಾಧ್ಯಕ್ಷ ಡಾ. ಸಂಜೀವಕುಮಾರ ಅತಿವಾಳೆ, ಪ್ರಮುಖರಾದ ಅನೀಲಕುಮಾರ ದೇಶಮುಖ, ಎಂ.ಪಿ. ಮುದಾಳೆ ಮಾತನಾಡಿದರು. ಈ ವೇಳೆ ಅನೇಕ ಕವಿಗಳು ತಮ್ಮ ಸ್ವರಚಿತ ಕವನ ವಾಚನ ಮಾಡಿದರು. ರವೀಂದ್ರ ಲಂಜವಾಡಕರ್ ಸ್ವಾಗತಿಸಿದರು. ದೇವಿದಾಸ ಜೋಶಿ ನಿರೂಪಣೆ ಮಾಡಿದರು. ಅಜೀತ ನೇಳಗೆ ವಂದಿಸಿದರು.