ಜಿಲ್ಲೆ

ಬದುಕಿಗೆ ಬಲ ತುಂಬಿದ ಬಿಳಿ ಇಲಿಗಳು!

ಗಿನಿಪಿಗ್ ಸಾಕುತ್ತಿರುವ ಕಂಪ್ಯೂಟರ್ ಸೈನ್ಸ್ ಪದವೀಧರೆ ಶರ್ಮಿಳಾ

ವಿಜಯವಾಣಿ ಸುದ್ದಿಜಾಲ ಆನೇಕಲ್
ಕರೊನಾ ಕಾಲದಲ್ಲಿ ಉದ್ಯೋಗ ಕಳೆದುಕೊಂಡ ಕಂಪ್ಯೂಟರ್ ಸೈನ್ಸ್ ಬಿಇ ಪದವೀಧರೆಯೊಬ್ಬರು ಪ್ರಯೋಗಾಲಯ ಮತ್ತು ಔಷಧ ಪ್ರಯೋಗಕ್ಕೆ ಬಳಸುವ ಗಿನಿಪಿಗ್(ಬಿಳಿಇಲಿ) ಸಾಕಿ ಯಶಸ್ಸು ಕಂಡಿದ್ದಾರೆ.
ಕರ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿನ್ನೂರಿನ ಯುವ ಉದ್ಯಮಿ ಶರ್ಮಿಳಾ(35) ಬಿಳಿಇಲಿ ಸಾಕಿ ಬದುಕು ಬಂಗಾರವಾಗಿಸಿಕೊಂಡ ಮಹಿಳೆ.
ಉಪನ್ಯಾಸಕಿಯಾಗಿದ್ದ ಶರ್ಮಿಳಾ ಅವರನ್ನು ಕರೊನಾ ಸಮಯದಲ್ಲಿ ಕೆಲಸದಿಂದ ತೆಗೆದು ಹಾಕಲಾಯಿತು. ಆ ವೇಳೆ ಎದೆಗುಂದದೆ ಉದ್ಯಮ ಆರಂಭಿಸುವ ಆಲೋಚನೆ ಮಾಡಿದರು. ಆಗ ಪರಿಚಿತರಿಂದ ಗಿನಿಪಿಗ್ ಸಾಕಣೆ ಮಾಹಿತಿ ಪಡೆದರು. ಆಗ ಕರೊನಾ ಲಸಿಕೆ ಮತ್ತು ವೈದ್ಯಕೀಯ ಪ್ರಯೋಗಗಳು ಹೆಚ್ಚಾಗಿದ್ದರಿಂದ ಬಿಳಿ ಇಲಿಗಳಿಗೆ ಹೆಚ್ಚು ಬೇಡಿಕೆ ಇತ್ತು. ಹೀಗಾಗಿ ಬಿಳಿಇಳಿ ಸಾಕಲು ಆರಂಭಿಸಿದರು.
ಕೇಂದ್ರ ಸರ್ಕಾರ ಸಂಜೀವಿನಿ ಯೋಜನೆ, ಕಾಳಿಕಾಂಬ ಸ್ತ್ರೀಶಕ್ತಿ ಸಂಘ ಮತ್ತು ಶ್ರೀವಿನಾಯಕ ಸ್ತ್ರೀಶಕ್ತಿ ಸಂಘದಲ್ಲಿ ಸಾಲ ಪಡೆದು ಸಂಪನ್ಮೂಲ ಕ್ರೋಡೀಕರಿಸಿ 6 ಲಕ್ಷ ರೂಪಾಯಿ ವೆಚ್ಚದಲ್ಲಿ ಉದ್ಯಮಕ್ಕೆ ಅಡಿಗಲ್ಲು ಹಾಕಿದರು. ಬೆಂಗಳೂರಿನ ಹೆಬ್ಬಾಳದ ಪ್ರಯೋಗಾಲದಿಂದ 200 ಗಿನಿಪಿಗ್ ಮರಿ ತಂದು ಸಾಕಣೆ ಆರಂಭಿಸಿದರು. ಈಗ ಇವರ ಫಾರ್ಮ್‌ನಲ್ಲಿ 2,500 ಗಿನ್‌ಪಿಗ್‌ಗಳಿವೆ. ಇವರು 2020ರಲ್ಲಿ ಸಾಕಣೆಕೆ ಆರಂಭಿಸಿದಾಗ ಮಾಸಿಕವಾಗಿ 20 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದರು. ಈಗ 3 ಲಕ್ಷದರೂಪಾಯಿವರೆಗೆ ದುಡಿಯುತ್ತಿದ್ದಾರೆ. ಐವರು ಮಹಿಳೆಯರಿಗೂ ನೌಕರಿ ನೀಡಿದ್ದಾರೆ.
ಹೊರ ರಾಜ್ಯಗಳಿಗೂ ಸಾಗಣೆ: ರಾಜ್ಯದ ಪ್ರತಿಷ್ಠಿತ ಕಂಪನಿ ಅಲ್ಲದೆ ತಮಿಳುನಾಡು ಮತ್ತು ತೆಲಂಗಾಣದ ಔಷಧ ಕಂಪನಿಗಳಿಗೆ, ಮೆಡಿಕಲ್ ಕಾಲೇಜು ಮತ್ತು ಪ್ರಯೋಗಾಲಯಗಳಿಗೆ ಇಲ್ಲಿಂದಲೇ ಗಿನಿಪಿಗ್ ಪೂರೈಕೆ ಮಾಡಲಾಗುತ್ತಿದೆ. ವಿವಿಧ ಕಂಪನಿಯವರು ಗ್ರಾಮಕ್ಕೆ ಭೇಟಿ ನೀಡಿ ಗಿನಿಪಿಗ್‌ಗಳನ್ನು ಖರೀದಿಸುತ್ತಿದ್ದಾರೆ. ಹೈದರಾಬಾದ್ ಕಂಪನಿಯೊಂದು ಒಂದು ತಿಂಗಳಿಗೆ ಎರಡು ಸಾವಿರ ಗಿನ್‌ಪಿಗ್ ಪೂರೈಕೆ ಮಾಡುವಂತೆ ಬೇಡಿಕೆ ಇಟ್ಟಿದೆ. ಆದರೆ ನಮ್ಮಲ್ಲಿ ಸಾಕಣೆ ಮಾಡಲು ಜಾಗ ಇಲ್ಲದೆ ಎರಡೂವರೆ ಸಾವಿರ ಮರಿಯಷ್ಟೇ ಸಾಕುತ್ತಿದ್ದೇವೆ. ಉದ್ಯಮ ವಿಸ್ತರಿಸಿ, ಇನ್ನಷ್ಟು ಮಂದಿಗೆ ಕೆಲಸ ಕೊಡಬೇಕೆಂಬುದು ನನ್ನ ಆಸೆ ಎನ್ನುತ್ತಾರೆ ಶರ್ಮಿಳಾ.

ಇಲ್ಲಿಯೇ ಸಂತಾನೋತ್ಪತ್ತಿ: ಒಂದು ಸಾವಿರ ಬಿಳಿಇಲಿ ಸಾಕಣಿಕೆಗೆ ಮಾಸಿಕವಾಗಿ 1 ಲಕ್ಷ ರೂಪಾಯಿ ವೆಚ್ಚ ತಗಲುತ್ತದೆ. ಒಂದು ತಿಂಗಳಿನಲ್ಲಿ 400 ರಿಂದ 500 ಮರಿಗಳನ್ನು ಮಾರಾಟ ಆಗುತ್ತವೆ. ಇದರಿಂದ 3 ಲಕ್ಷ ರೂ. ಆದಾಯ ಬರುತ್ತದೆ. ಸಾಕಣೆ ವೆಚ್ಚ, ನೌಕರರ ವೇತನ ಕಳೆದು 1.5 ಲಕ್ಷ ಲಾಭ ಉಳಿತಾಯ ಆಗುತ್ತದೆ ಎನ್ನುತ್ತಾರೆ ಶರ್ಮಿಳಾ. ಆರಂಭದಲ್ಲಿ 200 ಮರಿಗಳನ್ನು ತಂದಿದ್ದನ್ನು ಬಿಟ್ಟರೆ ಮತ್ತೆ ಮರಿಗಳನ್ನು ತಂದಿಲ್ಲ. ಇಲ್ಲಿಯೇ ಸಂತಾನೋತ್ಪತ್ತಿ ಮಾಡಲಾಗುತ್ತದೆ. ಒಂದು ಸಾವಿರ ಬಿಳಿಇಳಿ ಬೆಳೆವಣಿಗೆಯಾದರೆ 400 ಮರಿ ಹಾಕುತ್ತವೆ. ಮರಿಗಳು 200 ರಿಂದ 300 ಗ್ರಾಂ ಬೆಳೆವಣಿಗೆ ಆದ ತಕ್ಷಣ ಒಂದಕ್ಕೆ 600ರಿಂದ 700 ರೂಪಾಯಿಯಂತೆ ಮಾರಾಟ ಆಗುತ್ತವೆ. ವೈದ್ಯಕೀಯ ಮತ್ತು ವಿಜ್ಞಾನ ಕಾಲೇಜುಗಳು ಆರಂಭದ ವೇಳೆ ಗಿನ್‌ಪಿಗ್‌ಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಆಗ ಒಂದು ಮರಿ 800 ರೂಪಾಯಿಗೆ ಮಾರಾಟ ಆಗುತ್ತದೆ ಎನ್ನುತ್ತಾರೆ ಶರ್ಮಿಳಾ.
ಮೃದು ಸ್ವಾಭಾವ: ಇವು ಮನೆ ಮತ್ತು ಬೀದಿಯಲ್ಲಿ ಕಾಣುವ ಇಳಿಗಳಂತಲ್ಲ. ಮೃದು ಸ್ವಭಾವದ ಜೀವಿಗಳು. ಗೂಡು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಸೀಮೆ ಹಸುಗಳಿಗೆ ನೀಡುವ ಫಾರ್ಮ್ ಹುಲ್ಲು ಮತ್ತು ಬೂಸಾವನ್ನು ಆಹಾರವಾಗಿ ನೀಡಲಾಗುತ್ತದೆ. ಮರಿಯು 200-300 ಗ್ರಾಂ ಬೆಳೆಯಲು 15-20 ದಿನ ಹಿಡಿಯುತ್ತದೆ. ಫಾರ್ಮ್‌ನಲ್ಲಿ ಬೆಳೆಯುವ ಇವು ಹೊರಗಿನ ಹವಾಮಾನಕ್ಕೆ ಹೊಂದಿಕೊಳ್ಳುವುದಿಲ್ಲ. ತಾಪಮಾನವನ್ನು ತಡೆಯಲಾರವು. ಹೀಗಾಗಿ ಇವುಗಳನ್ನು ಖರೀದಿಸುವವರು ಹವಾನಿಯಂತ್ರಿತ ವಾಹನದಲ್ಲಿ ಸಾಕಣಿಕೆ ಮಾಡುತ್ತಾರೆ.

ಗಿನ್‌ಪಿಗ್ ಸಾಕಣೆಯಿಂದ ನಾಲ್ಕು ವರ್ಷದಲ್ಲಿ ಎಂದೂ ನಷ್ಟ ಆಗಿಲ್ಲ. ಮರಿಗಳನ್ನು ಮಕ್ಕಳಂತೆ ಸಾಕುತ್ತಿದ್ದೇನೆ. ಯಾವುದೇ ಕೆಲಸವಾದರೂ ಪರಿಶ್ರಮ ಶ್ರದ್ಧೆಯಿಂದ ಕೆಲಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಅಂದು ನನ್ನನ್ನು ಕೆಲಸದಿಂದ ತೆಗದಿದ್ದರು. ಈಗ ನಾನೇ ಐವರಿಗೆ ಕೆಲಸ ಕೊಟ್ಟಿದ್ದೇನೆ. ಇನ್ನಷ್ಟು ಮಂದಿ ಕೆಲಸ ಕೊಡಲು ಆಲೋಚನೆ ಮಾಡಿದ್ದೇನೆ.ಶರ್ಮಿಳಾ ದಿನ್ನೂರಿನ ಯುವ ಉದ್ಯಮಿ