ಮದ್ದೂರು: ವ್ಯಾವಹಾರಿಕವಾಗಿ ಪರಭಾಷೆ ಅವಲಂಬಿಸಿದರೂ ಬದುಕಿಗಾಗಿ ಕನ್ನಡ ಭಾಷೆಯನ್ನು ಅವಲಂಬಿಸಬೇಕು ಎಂದು ಮಾಂಡವ್ಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಕೆ.ಚಂದ್ರಶೇಖರ್ ಹೇಳಿದರು.
ತಾಲೂಕಿನ ಬೆಸಗರಹಳ್ಳಿ ಗ್ರಾಮದ ಮಾನಸ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಸಾಹಿತ್ಯ ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳುವ ಮೂಲಕ ಕನ್ನಡ ನಾಡು-ನುಡಿಗೆ ಗೌರವ ನೀಡಬೇಕು ಎಂದರು.
ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳು ನಡೆದವು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾಸಂಸ್ಥೆ ಅಧ್ಯಕ್ಷ ವಿ.ಕೆ.ಜಗದೀಶ, ಕಾರ್ಯದರ್ಶಿ ಎಚ್.ಪಿ.ನಾಗರಾಜು, ಶೈಕ್ಷಣಿಕ ಮಾರ್ಗದರ್ಶಕ ಎಚ್.ಪಿ.ನಿಂಗರಾಜು, ಪ್ರಾಂಶುಪಾಲ ಪ್ರವೀಣ್, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರೀತಮ್, ಪರ್ನಾಜ್, ಶಾಮ್, ನಿಶ್ಚಿತಾ, ಜೆ.ರಾಣಿ, ವರ್ಷಿತಾ, ಮುಖ್ಯ ಶಿಕ್ಷಕ ಬಿ.ಎಂ.ಬಸವರಾಜು ಇತರರು ಇದ್ದರು.