ಇಂಡಿಯ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಗೆ ಶಾಸಕ ಯಶವಂತರಾಯಗೌಡ ಪಾಟೀಲ ಚಾಲನೆ ನೀಡಿದರು. ಗುರುಸಂಗನಬಸವ ಸ್ವಾಮೀಜಿ, ಅಬೀದ್ ಗದ್ಯಾಳ, ಟಿ.ಎಸ್. ಆಲಗೂರ, ಬಿ.ಎಸ್. ಕಡಕಭಾವಿ, ಸುನೀಲ ಮದ್ದಿನ ಇತರರಿದ್ದರು. 
ಜಿಲ್ಲೆ

ಬದಲಾವಣೆಯ ಪ್ರೇರಕ ಶಕ್ತಿ ಗುರು

ಇಂಡಿ: ಸಮಾಜದ ಬದಲಾವಣೆಯ ಪ್ರೇರಕ ಶಕ್ತಿ ಎಂದರೆ ಗುರು. ಅರಿವೇ ಗುರು, ಗುರುವೇ ದೈವ. ಜಗತ್ತಿನ ಎಲ್ಲ ಸಾಧಕರ ಹಿಂದೆ ಗುರು ಇರುವನು. ಎಲ್ಲರನ್ನೂ ಪರಿಪೂರ್ಣ ಮಾಡುವವರು ಶಿಕ್ಷಕರು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

1950-60ರ ದಶಕದಲ್ಲಿ ಸಮಾಜದ ಚಿಂತನೆಗೆ, ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಿದವರು ಈ ನಾಡಿನ ಬಂಥನಾಳದ ಶಿವಯೋಗಿಗಳು. ವೈಚಾರಿಕ ವಿಚಾರಧಾರೆ, ಸರ್ವಧರ್ಮಗಳ ಚಿಂತಕರಾಗಿದ್ದರು. ಅವರು ಜಿಲ್ಲೆಯ ನೀರಾವರಿಗಾಗಿ ಹೋರಾಟ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದರು.

ಡಾ. ಎಸ್. ರಾಧಾಕೃಷ್ಣನ್ ಅವರು ಈ ದೇಶದ ಆದರ್ಶ ಶಿಕ್ಷಕರಾಗಿ, ರಾಷ್ಟ್ರಪತಿಯಾಗಿ ಇಂದಿನ ಪೀಳಿಗೆಗೆ ಆದರ್ಶ ಪ್ರಾಯರಾಗಿದ್ದಾರೆ. ಅನುಕರಣೀಯ ಬದುಕನ್ನು ಇಂದಿನ ಶಿಕ್ಷಕರು ರೂಢಿಸಿಕೊಂಡು ಜಗತ್ತಿನ ಹೊಸ ಹೊಸ ಆವಿಷ್ಕಾರಗಳನ್ನು ಇಂದಿನ ಮಕ್ಕಳಿಗೆ ಬೋಧಿಸಬೇಕು. ಶಿಕ್ಷಕರೇ ತಮ್ಮ ಸ್ವಯಂ ನೀತಿಯಿಂದ ಪಾಠ ಬೋಧಿಸಬೇಕು. ಇಂಡಿ ಭಾಗ ಎಲ್ಲ ರಂಗಗಳಲ್ಲಿ ಮುಂದೆ ಬರಬೇಕು. ಇಂದು ಇಸ್ರೋ ಬಹು ದೊಡ್ಡ ಸಾಧನೆ ಮಾಡಿದ್ದು, ನಮ್ಮ ಮಕ್ಕಳು ವಿಜ್ಞಾನಿಗಳಂತೆ ಸಾಧನೆ ಮಾಡಲಿ. ಶಿಕ್ಷಣವು ಸಮಾಜದ ಬೆಳವಣಿಗೆಗೆ ಬಹುಮುಖ್ಯ ಎಂದರು.

ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ನಮ್ಮ ಜ್ಞಾನವನ್ನು ಎಲ್ಲರಿಗೂ ಹಂಚುವದರಿಂದ ವೃದ್ಧಿಯಾಗುತ್ತದೆ. ಜಗತ್ತಿನ ಅತಿ ಸವಾಲಿನ ಕೆಲಸವೇ ಶಿಕ್ಷಕ ವೃತ್ತಿ. 1964ರ ಕೊಠಾರಿ ಆಯೋಗದಲ್ಲಿ ತಿಳಿಸಿದಂತೆ ದೇಶದ ಭದ್ರ ಬುನಾದಿಗೆ ಶಿಕ್ಷಕರೇ ಆಧಾರ. ಹಾಗಾಗಿ ಶಿಕ್ಷಕರು ಸಮಾಜದ ರೂವಾರಿಯಾಗಿದ್ದಾರೆ. ಅವರು ಸಮಾಜ ನಿರ್ಮಾಣದ ಹೊಣೆಗಾರಿಕೆ ಅರಿತು ನಡೆಯಬೇಕು. ಮಕ್ಕಳ ಭವಿಷ್ಯದಲ್ಲಿ ದೇಶದ ಭವಿಷ್ಯ ಅಡಗಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದರು.

ಯರನಾಳ ಮಠದ ಗುರುಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಆಲಗೂರ, ತಹಸೀಲ್ದಾರ್ ಬಿ.ಎಸ್. ಕಡಕಭಾವಿ, ತಾಪಂ ಇಒ ಸುನೀಲ ಮದ್ದಿನ, ಶಿಕ್ಷಣ ಸಂಯೋಜಕ ಎಂ.ಬಿ. ಡೇಂಬ್ರೆ, ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಎಸ್. ಲಾಳಸೇರಿ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಎಂ.ಎಚ್. ಯರಗುದ್ರಿ, ಎಸ್.ವಿ. ಹರಳಯ್ಯ, ಎಸ್.ಡಿ. ಪಾಟೀಲ, ಎ.ಒ. ಹೂಗಾರ, ಎನ್.ಎಂ. ಕಾಳೆ, ಸಿದ್ದು ಹತ್ತಳ್ಳಿ ಇತರರಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್. ನಡುಗಡ್ಡಿ ಸ್ವಾಗತಿಸಿದರು.