ಬಾಳೆಹೊನ್ನೂರು: ಪತ್ರಿಕೆಗಳು ಸಮಾಜದಲ್ಲಿ ಬದಲಾವಣೆ ತರುತ್ತಿವೆ ಎಂದು ಎನ್.ಆರ್.ಪುರ ತಾಲೂಕು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಸತೀಶ್ ಅರಳೀಕೊಪ್ಪ ಹೇಳಿದರು.
ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ, ಅಧಿಕಾರಿಗಳು, ರಾಜಕಾರಣಿಗಳು ಮಾಡುವ ತಪ್ಪುಗಳನ್ನು ಪತ್ರಿಕೆಗಳು ಪ್ರಕಟಿಸುವ ಮೂಲಕ ಸಮಾಜ ತಿದ್ದುವ ಕೆಲಸ ಮಾಡುತ್ತಿವೆ ಎಂದರು.
ಸಾಮಾಜಿಕ ಜಾಲತಾಣ, ದೃಶ್ಯಮಾಧ್ಯಮಗಳು ಇಂದು ಹೆಚ್ಚು ಪ್ರಚಾರದಲ್ಲಿದ್ದರೂ ಪತ್ರಿಕೆಗಳು ತನ್ನದೇ ಆದ ಮಹತ್ವ ಉಳಿಸಿಕೊಂಡು ಜನರ ಮನಗೆದ್ದಿವೆ. ಪತ್ರಿಕೆಗಳ ಮುದ್ರಣ ವೆಚ್ಚ, ಸಾಗಣೆ ವೆಚ್ಚ ಹೆಚ್ಚಾಗಿ ಓದುಗರ ಸಂಖ್ಯೆ ಕಡಿಮೆಯಾಗಿರುವುದರಿಂದ ಮುದ್ರಣ ಮಾಧ್ಯಮ ಸಂಕಷ್ಟದಲ್ಲಿದೆ ಎಂದರು.
ಜೆಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರವಹಿಸಿವೆ. ಪತ್ರಿಕೆಗಳ ಬೆಂಬಲದಿಂದ ಸಂಘ ಸಂಸ್ಥೆಗಳು ವಿಶೇಷ ಸಾಧನೆ ಮಾಡಲು ಸಾಧ್ಯವಿದೆ ಎಂದರು.
ಪತ್ರಕರ್ತರಾದ ಎಚ್.ಎನ್.ಸತೀಶ್ ಜೈನ್, ಸಚಿನ್‌ಕುಮಾರ್, ಬಿ.ಎಸ್.ನಾಗರಾಜ ಭಟ್, ಪ್ರವೀಣ್‌ಕುಮಾರ್, ದೇವರಾಜ್ ಬನ್ನೂರು, ಯಜ್ಞಪುರುಷ ಭಟ್ ಅವರನ್ನು ಗೌರವಿಸಲಾಯಿತು.
ಜೇಸಿ ಕಾರ್ಯದರ್ಶಿ ವಿ.ಅಶೋಕ್, ಶಾಹಿದ್, ಚೈತನ್ಯ ವೆಂಕಿ, ಸುಧಾಕರ್, ಸುರೇಂದ್ರ, ಸಿ.ಪಿ.ರಮೇಶ್, ಸೈಯದ್ ಫಾಜಿಲ್, ಎಚ್.ಗೋಪಾಲ್, ಮಂಜುನಾಥ್ ತುಪ್ಪೂರು, ಕೆ.ಎಂ.ರಾಘವೇಂದ್ರ ಇತರರಿದ್ದರು.