ಸೊರಬ: ಪ್ರಾಚೀನ ಕಾಲದಿಂದಲೂ ಮಾನವ ಪ್ರಕೃತಿಯನ್ನು ದೇವರೆಂದು ಆರಾಧಿಸುತ್ತ ಬಂದಿದ್ದಾನೆ. ಆದರೆ ವಿದೇಶಿ ಸಂಸ್ಕೃತಿಯ ಪ್ರಭಾವ, ಬದಲಾದ ಜೀವನ ಶೈಲಿಯಿಂದ ಪರಿಸರದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿವೆ ಎಂದು ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ್ ಹೇಳಿದರು. ಪಟ್ಟಣದ ಮುರುಘಾ ಮಠದಲ್ಲಿ ಭಾನುವಾರ ಅದಮ್ಯ ಚೇತನ ಬೆಂಗಳೂರು, ಮುರುಘಾ ಮಠ, ಪರಿಸರ ಜಾಗೃತಿ ಟ್ರಸ್ಟ್ ಸಹಯೋಗದಲ್ಲಿ ಅನಂತ ಪ್ಲೇಟ್ ಬ್ಯಾಂಕ್ ಹಾಗೂ ಪವಿತ್ರ ವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬರಲ್ಲೂ ನಮ್ಮ ಕಸ ನಮ್ಮ ಹೊಣೆ ಎಂಬ ಅರಿವು ಮಾಡಿಸಬೇಕು. ಈ ಎಲ್ಲ ಪ್ರಯತ್ನಗಳು ಶಾಲಾ ಮಕ್ಕಳಿಂದಲೇ ಆರಂಭವಾಗಬೇಕು. ಮನುಷ್ಯರು ಬಳಸುತ್ತಿರುವ ಆಹಾರ ಮತ್ತು ವಿಹಾರ ಎರಡರಿಂದಲೂ ಪರಿಸರಕ್ಕೆ ಮಾರಕ ಉಂಟಾಗುತ್ತಿದೆ ಎಂದರು. ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ನಾವು ವಾಸಿಸುವ ಪರಿಸರವು ಸುಂದರ ಮತ್ತು ಸ್ವಚ್ಛವಾಗಿದ್ದರೆ ಮಾತ್ರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಒತ್ತಡದ ಬದುಕಿನಲ್ಲಿ ಮನುಷ್ಯ ಬದುಕುತ್ತಿದ್ದಾನೆ. ಆದರೂ ಸ್ವಚ್ಛ ಹಾಗೂ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಇಂತಹ ಪರಿಸರ ಜಾಗೃತಿ ಕಾರ್ಯಗಳು ನಡೆಯಬೇಕು ಎಂದರು. ವೃಕ್ಷಲಕ್ಷ ಆಂದೋಲನದ ಸಂಚಾಲಕ ಕೆ.ವೆಂಕಟೇಶ್ ಮಾತನಾಡಿ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವಾ ನಿರತರಾಗಿ ತೇಜಸ್ವಿನಿ ಅನಂತಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಉದ್ಯಮಿ ಪ್ರದೀಪ್ ಓಕ್ ಮಾತನಾಡಿ, ಸೊರಬದಲ್ಲಿ 18ನೇ ಪ್ಲೇಟ್ ಬ್ಯಾಂಕ್ ಸ್ಥಾಪಿಸಲಾಗಿದೆ. ಪ್ಲಾಸ್ಟಿಕ್ ಬಳಕೆಯಿಂದ ಪ್ರಾಣಿಗಳ ಜೀವಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಹೇಳಿದರು. ಉದ್ಯಮಿ ಪ್ರದೀಪ್ ಓಕ್, ಜಿಪಂ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ವಕೀಲ ನಾಗಪ್ಪ, ಚಕ್ರವಾಕ ಸುಬ್ರಹ್ಮಣ್ಯ, ಶ್ರೀಪಾದ ಬಿಚ್ಚುಗತ್ತಿ, ನಂದೀಶ್ ಗೌಡ, ಆಶಿಕ್, ಈರೇಶ ಗೌಡ, ಪೂರ್ಣಿಮಾ ಶಿವಯೋಗಿ, ಶಿವಾನಂದ ಪಾಣಿ, ಅಮೃತ, ರೇಣುಕಮ್ಮ ಗೌಳಿ, ಜಯಮಾಲಾ, ಸೊರಬ ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್, ಡಿ.ಶಿವಯೋಗಿ ಮತ್ತಿತರರಿದ್ದರು.
ಪಶ್ಚಿಮ ಘಟ್ಟಗಳು ಅಪಾರ ಅರಣ್ಯ ಸಂಪನ್ಮೂಲ ಹೊಂದಿವೆ. ಇಲ್ಲಿ ಅನೇಕ ಜೀವ ವೈವಿಧ್ಯ ಪ್ರಾಣಿ ಸಂಕುಲಗಳು, ನದಿಗಳು ಉಗಮಗೊಂಡಿವೆ. ಮನುಷ್ಯನ ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆಯಿಂದ ಪ್ರಾಣಿಪಕ್ಷಿಗಳ ಸಂಕುಲಕ್ಕೆ ಹಾನಿಯಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಕಸಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಹಭಾಗಿತ್ವದಿಂದ ಕೈಜೋಡಿಸಬೇಕು. ಡಾ. ತೇಜಸ್ವಿನಿ ಅನಂತಕುಮಾರ್ ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ