ದೊಡ್ಡಬಳ್ಳಾಪುರ: ರೌಡಿಶೀಟರ್‌ಗಳು ಪದೇಪದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ, ಅಂತಹವರನ್ನು ಗಡಿಪಾರು ಮಾಡಲಾಗುವುದು ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್.ನಾಗರಾಜ್ ಖಡಕ್ ಎಚ್ಚರಿಕೆ ನೀಡಿದರು.
ನಗರದ ಡಿವೈಎಸ್‌ಪಿ ಕಚೇರಿ ಆವರಣದಲ್ಲಿ ಭಾನುವಾರ ದೊಡ್ಡಬಳ್ಳಾಪುರ ಉಪವಿಭಾಗಕ್ಕೆ ಒಳಪಡುವ ದೊಡ್ಡಬಳ್ಳಾಪುರ ಗ್ರಾಮಾಂತರ, ದೊಡ್ಡಬಳ್ಳಾಪುರ ನಗರ, ಹೊಸಹಳ್ಳಿ, ದೊಡ್ಡಬೆಳವಂಗಲ, ವಿಜಯಪುರ, ವಿಶ್ವನಾಥಪುರ, ಚನ್ನರಾಯಪಟ್ಟಣ, ರಾಜಾನುಕುಂಟೆ ಠಾಣಾ ವ್ಯಾಪ್ತಿಯ ರೌಡಿಶೀಟರ್‌ಗಳ ಪರೇಡ್‌ನಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯಾದ್ಯಂತ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ, ಅದರಲ್ಲೂ ರೌಡಿಶೀಟರ್‌ಗಳು ಹೆಚ್ಚಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಹಿನ್ನೆಲೆ ರೌಡಿಗಳ ಪರೇಡ್ ಹಮ್ಮಿಕೊಳ್ಳಲಾಗಿದೆ. ದೊಡ್ಡಬಳ್ಳಾಪುರ ಉಪವಿಭಾಗದಲ್ಲಿ 248 ರೌಡಿಶೀಟರ್‌ಗಳಿದ್ದಾರೆ. ಅದರಲ್ಲಿ ಪರೇಡ್‌ನಲ್ಲಿ 118 ಮಂದಿ ಹಾಜರಾಗಿದ್ದು, ಇನ್ನು ಕೆಲವರು ಗೈರಾಗಿದ್ದಾರೆ. ಹಲವರು ಅನಾರೋಗ್ಯ ಕಾರಣದಿಂದ ಬಂದಿಲ್ಲ ಮತ್ತೆ ಕೆಲವರು ಜೈಲಿನಲ್ಲಿದ್ದಾರೆ. ಇದರಲ್ಲಿ 25 ಜನ ಕೊಲೆ ಆರೋಪಿಗಳಿದ್ದಾರೆ. ಉದ್ದೇಶ ಪೂರ್ವಕವಾಗಿ ಕಾನೂನಿನ ಭಯವಿಲ್ಲದೇ ಜನಸಾಮಾನ್ಯರಿಗೆ ತೊಂದರೆ ನೀಡುವವರನ್ನು ರೌಡಿಪಟ್ಟಿಗೆ ಸೇರಿಸಲಾಗಿದೆ. ಕೆಲವರಿಗೆ ತಾನು ಮಾಡಿರುವ ತಪ್ಪು ಅರಿವಿಗೆ ಬಂದಿದ್ದು, ಮತ್ತೆ ಕೆಲವರಿಗೆ ಇನ್ನೂ ತಿಳುವಳಿಕೆ ಬಾರದೇ ಪುನರಾರ್ವತಿತವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಅಂತವರಿಗೆ ಮತ್ತಷ್ಟು ಕಠಿಣ ಶಿಕ್ಷೆ ವಿಧಿಸಲಾಗುವುದು. ಎಚ್ಚೆತ್ತುಕೊಳ್ಳದಿದ್ದರೆ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಸಿದರು.
ರೌಡಿ ಶೀಟರ್‌ಗಳು ಯಾವುದೇ ಕಾರಣಕ್ಕೂ ಸಮಾಜಘಾತುಕ ಕೃತ್ಯಗಳಲ್ಲಿ ಪಾಲ್ಗೊಳ್ಳಬಾರದು. ಅಂತಹ ಕೃತ್ಯಗಳಿಗೆ ಕುಮ್ಮಕ್ಕು ಸಹ ನೀಡಬಾರದು. ಒಂದು ವೇಳೆ ತಪ್ಪು ಮಾಡಿರುವುದು ಕಂಡುಬಂದರೆ ಶಿಕ್ಷೆ ಖಚಿತ ಎಂದು ಖಡಕ್ ಎಚ್ಚರಿಕೆ ನೀಡಿದರು. ಯಾರೇ ಶಿಫಾರಸ್ಸು ಮಾಡಿದರೂ ರೌಡಿ ಪಟ್ಟಿಯಿಂದ ಹೆಸರು ತೆಗೆಯುವುದಿಲ್ಲ. ರೌಡಿ ಶೀಟರ್ ಓಪನ್ ಮಾಡೋದಕ್ಕೆ ಕೇವಲ ಒಂದು ಗಂಟೆ ಸಾಕು, ಆದರೆ, ರೌಡಿ ಪಟ್ಟಿಯಿಂದ ಹೆಸರು ತೆಗೆಯುವುದಕ್ಕೆ ವರ್ಷಗಳೇ ಬೇಕು. ಆದ್ದರಿಂದ ಯಾರೂ ಸಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾಗರಾಜ್ ತಿಳಿಹೇಳಿದರು.