ನಂಜನಗೂಡು: ಮಹಾತ್ಮ ಗಾಂಧೀಜಿ ಅವರು ಭೇಟಿ ನೀಡಿದ್ದ ಬದನವಾಳು ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಈ ಬಾರಿ ಗಾಂಧಿ ಜಯಂತಿಯನ್ನು ರಾಜಕೀಯೇತರವಾಗಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ತಾಲೂಕಿನ ಬದನವಾಳು ಗ್ರಾಮದ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕರ್ನಾಟಕಕ್ಕೂ ದೇಶದ ಸ್ವಾತಂತ್ರ್ಯ ಹೋರಾಟಕ್ಕೂ ದೊಡ್ಡ ನಂಟಿದೆ. ಮಹಾತ್ಮ ಗಾಂಧೀಜಿ ಬೆಳಗಾವಿ ಅಧಿವೇಶನದಲ್ಲಿ ಸ್ವಾತಂತ್ರ್ಯ ಹೋರಾಟದ ಅಧ್ಯಕ್ಷತೆ ವಹಿಸಿಕೊಂಡರು. ಮಹಾತ್ಮ ಗಾಂಧಿ ಜಯಂತಿಯಂದು ರಾಹುಲ್ ಗಾಂಧಿ ಅವರು ನಂಜನಗೂಡು ಭಾಗಕ್ಕೆ ಭಾರತ್ ಜೋಡೋ ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದಾರೆ. 1927ರಲ್ಲಿ ಬದನವಾಳಿಗೆ ಮಹಾತ್ಮ ಗಾಂಧೀಜಿ ಭೇಟಿ ಕೊಟ್ಟಿದ್ದರು. ಹಾಗಾಗಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ರಾಹುಲ್ ಗಾಂಧಿ ಅವರೇ ಆಗಮಿಸುತ್ತಿದ್ದು, ಅವರೊಂದಿಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ದೇಶವನ್ನು ಒಗ್ಗಟ್ಟಿನಿಂದ ಕೊಂಡೊಯ್ಯುವ, ಸಂವಿಧಾನದ ಪಾವಿತ್ರೃತೆಯನ್ನು ಎತ್ತಿ ಹಿಡಿಯುವ, ಶಾಂತಿ ಸಾಮರಸ್ಯಕ್ಕಾಗಿ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆಯನ್ನು ದೇಶದ ಉದ್ದಗಲಕ್ಕೂ ಕೈಗೊಂಡಿದ್ದಾರೆ. ಗುಂಡ್ಲುಪೇಟೆ ಮಾರ್ಗವಾಗಿ ರಾಜ್ಯ ಪ್ರವೇಶಿಸುವ ಅವರು, 22 ದಿನಗಳ ಕಾಲ 510 ಕಿ.ಮೀ ರಾಜ್ಯದಲ್ಲಿ ಪಾದಯಾತ್ರೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅಭದ್ರತೆ, ಧರ್ಮ ಸಂಘರ್ಷಣೆಯಿಂದಾಗಿ ದೇಶ ಸಂಕಷ್ಟದಲ್ಲಿದೆ. ಧರ್ಮದ ಹೆಸರಿನಲ್ಲಿ ವೈಮನಸ್ಸು ಹೆಚ್ಚುತ್ತಿದೆ. ಜಾತಿ, ಧರ್ಮ ತಾರತಮ್ಯ ಹೋಗಲಾಡಿಸಬೇಕು. ನಿರುದ್ಯೋಗ ಸಮಸ್ಯೆ ನೀಗಿಸಬೇಕು. ಬೆಲೆ ಏರಿಕೆಯಿಂದಾದ ಜನರನ್ನು ಪಾರು ಮಾಡಬೇಕು. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸಿಗುವಂತಾಗಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂಬ ಹಲವು ಅಂಶಗಳನ್ನು ಮುಂದಿಟ್ಟುಕೊಂಡು ಯಾತ್ರೆ ಕೈಗೊಂಡಿದ್ದು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿ, ರಾಹುಲ್ ಗಾಂಧಿ ಅವರು ಮಹಾತ್ಮ ಗಾಂಧಿ ಜಯಂತಿ ಆಚರಣೆಗಾಗಿ ಬದನವಾಳು ಗ್ರಾಮಕ್ಕೆ ಅ.2ರಂದು ಭೇಟಿ ನೀಡುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಗೊಳಿಸಿದೆ ಎಂದರು.
ರೂಪುರೇಷೆ ಚರ್ಚೆ: ಇನ್ನು ಗಾಂಧಿ ಜಯಂತಿ ಆಚರಣೆ ಕುರಿತಂತೆ ಪಕ್ಷದ ಪ್ರಮುಖ ನಾಯಕರೊಂದಿಗೆ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದರು. ಖಾದಿ ಕೇಂದ್ರದ ಇತಿಹಾಸ ಕುರಿತು ಮಾಹಿತಿ ಸಂಗ್ರಹಿಸಿದರು. ಕೇಂದ್ರದಲ್ಲಿ ಉತ್ಪಾದನೆ ವಿವರವನ್ನು ಕಲೆ ಹಾಕಿದರು. ನೂಲು ನೇಯುವ, ಬಟ್ಟೆ ತಯಾರಿಸುವ ಕೈಮಗ್ಗಗಳನ್ನು ವೀಕ್ಷಿಸಿದರು. ಅಲ್ಲಿನ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು. ಗಾಂಧಿ ಭೇಟಿ ನೀಡಿ ಉಪನ್ಯಾಸ ನೀಡಿದ ಜಾಗದಲ್ಲಿ ನಿರ್ಮಿಸಿರುವ ಪ್ರತಿಮೆ ಮುಂದೆ ಫೋಟೋ ತೆಗೆಸಿಕೊಂಡರು.
ಒಕ್ಕಲಿಗರ ಭವನಕ್ಕೆ ಭೇಟಿ: ನಗರದ ರೋಟರಿ ಶಾಲೆಯ ಬಳಿ ನನೆಗುದಿಗೆ ಬಿದ್ದಿರುವ ಒಕ್ಕಲಿಗರ ಭವನಕ್ಕೆ ಆರ್ಥಿಕ ಸಹಾಯ ನೀಡುವಂತೆ ಒಕ್ಕಲಿಗರ ಸಂಘದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಭವನ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದರು. ಅಗತ್ಯ ನೆರವು ನೀಡುವ ನಿಟ್ಟಿನಲ್ಲಿ ಸಹಕಾರ ನೀಡುವುದಾಗಿ ಶಿವಕುಮಾರ್ ಭರವಸೆ ನೀಡಿದರು.
ಗೌಪ್ಯ ಮಾತುಕತೆ": ಒಕ್ಕಲಿಗರ ಭವನ ಜಾಗ ವೀಕ್ಷಣೆ ಬಳಿಕ ಸಮೀಪದಲ್ಲಿರುವ ರೋಟರಿ ಶಾಲಾ ಆವರಣದಲ್ಲಿ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹಾಗೂ ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ ಜತೆ ಗುಪ್ತ್ ಗುಪ್ತ್ ಮಾತುಕತೆ ನಡೆಸಿದ್ದು ಅಲ್ಲಿದ್ದ ಕಾರ್ಯಕರ್ತರಲ್ಲಿ ಕುತೂಹಲ ಕೆರಳಿಸಿತು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಕಾರ್ಯಕರ್ತರಲ್ಲಿ ಮನೆ ಮಾಡಿರುವ ಹೊತ್ತಿನಲ್ಲಿ ಈ ಮಾತುಕತೆ ಹಲವು ತಿರುವು ಪಡೆದುಕೊಂಡಿದೆ. ಕಳಲೆ ಕೇಶವಮೂರ್ತಿ ಅಥವಾ ಆರ್.ಧ್ರುವನಾರಾಯಣ ಇಬ್ಬರಲ್ಲಿ ಯಾರು ಅಭ್ಯರ್ಥಿ ಎಂಬ ಚರ್ಚೆಗೆ ತೆರೆ ಎಳೆಯುವ ನಿಟ್ಟಿನಲ್ಲಿ ಇಬ್ಬರ ಸಮ್ಮುಖದಲ್ಲಿ ಶಿವಕುಮಾರ್ ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.