ಬೆಳಗಾವಿ: ಹೋಳಿ ಹಬ್ಬ ಬಂತಂದರೆ ಸಾಕು, ಕುಂದಾನಗರಿ ಬೀದಿ ಬೀದಿಗಳಲ್ಲಿ ತಮಟೆ ಹಾಗೂ ಹಲಗೆ ಸದ್ದು ರಿಂಗಣಿಸುತ್ತದೆ. ಈ ಬಾರಿ ಬೆಳಗಾವಿಯಲ್ಲಿ ಬಣ್ಣದೋಕುಳಿಗೆ ಇನ್ನೂ ಮೂರ‌್ನಾಲ್ಕು ದಿನ ಬಾಕಿ ಇರುವಾಗಲೇ ರಂಗ ಪಂಚಮಿ ರಂಗೇರುತ್ತಿದೆ.
ಹುಣ್ಣಿಮೆ ಸಮೀಪಿಸುತ್ತಿದ್ದಂತೆ ಬಣ್ಣದೋಕುಳಿಯ ಸಂಭ್ರಮ ಮನೆ ಮಾಡುತ್ತಿದೆ. ಹೋಳಿ ಹಬ್ಬಕ್ಕೆ ನಗರ ಸೇರಿದಂತೆ ಜಿಲ್ಲಾದ್ಯಂತ ಭರದ ಸಿದ್ಧತೆ ನಡೆದಿದ್ದು, ಈಗಾಗಲೇ ಹಲಗೆ ನಿನಾದ ಮಾರ್ದನಿಸುತ್ತಿದೆ. ಯುವಕರು, ಚಿಣ್ಣರ ಕೈಯಲ್ಲಿ ಹಲಗೆಗಳು ಸದ್ದುಮಾಡುತ್ತಿದ್ದು, ಗಲ್ಲಿಗಲ್ಲಿಯಲ್ಲೂ ರಂಗಿನೋಕುಳಿಗೆ ವೇದಿಕೆ ಸಿದ್ಧಗೊಂಡಿವೆ. ಅಬಾಲ-ವೃದ್ಧರು ಸೇರಿ ಎಲ್ಲರೂ ಕಾಮ ದಹನ, ರಂಗ ಪಂಚಮಿ ಬಣ್ಣದಾಟಕ್ಕೆ ಕಾತರರಾಗಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಬಣ್ಣ, ಮುಖವಾಡ ಹಾಗೂ ಪಿಚಕಾರಿಗಳ ಖರೀದಿ ಜೋರಾಗಿದೆ.
ನಗರದ ಹೋಳಿ ಹಬ್ಬದ ಕೇಂದ್ರ ಬಿಂದು ವ್ಯಾಕ್ಸಿನ್ ಡಿಫೋ ಮೈದಾನ ‘ಹೋಳಿ ಮಿಲನ’ ಆಚರಣೆ ನಿರೀಕ್ಷೆ ಹೆಚ್ಚಿಸಿದೆ. ಪಾಂಗುಳ ಗಲ್ಲಿಯ ಅಶ್ವತ್ಥಾಮ ದೇವಸ್ಥಾನ ಭಕ್ತರ ಆಗಮನಕ್ಕಾಗಿ ಸಿದ್ಧಗೊಳ್ಳುತ್ತಿದ್ದು, ಬೆಳಗಾವಿ ಅದ್ದೂರಿ ಹೋಳಿಯಲ್ಲಿ ಪಾಲ್ಗೊಳ್ಳಲು ಬೇರೆಬೇರೆ ಜಿಲ್ಲೆ ಹಾಗೂ ಗೋವಾದಿಂದಲೂ ಯುವಕ-ಯುವತಿಯರು ಬರುತ್ತಾರೆ. ಹೊರ ಜಿಲ್ಲೆಗಳಿಗೆ ಉದ್ಯೋಗಕ್ಕಾಗಿ ಹೋಗಿರುವವರು ಈಗಾಗಲೆ ಮುಂಗುಡ ಟಿಕೆಟ್ ಕಾಯ್ದಿರಿಸಿದ್ದು, ಡಾಲ್ಬಿ ಸೌಂಡ್ ಸಿಸ್ಟಮ್ ಬುಕ್ಕಿಂಗ್‌ನಲ್ಲಿ ತೊಡಗಿದ್ದಾರೆ. ಈ ಬಗ್ಗೆ ನೆಹರೂನಗರದ ನಿವಾಸಿ ಪ್ರಕಾಶ ಜಾಧವ್ ಪ್ರತಿಕ್ರಿಯಿಸಿ, ಕಳೆದ ಮೂರು ವರ್ಷ ಸರಿಯಾಗಿ ಹೋಳಿ ಆಡಿರಲಿಲ್ಲ. ಈ ಬಾರಿ ಎಲ್ಲರೂ ಸೇರಿ ಹೋಳಿ ಆಡವುದಕ್ಕಾಗಿ ಪುಣೆ, ಗೋವಾ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉದ್ಯೋಗ ಮಾಡುತ್ತಿರುವ ಎಲ್ಲರೂ ಯೋಜನೆ ರೂಪಿಸಿದ್ದೇವೆ ಎಂದರು. ಬಣ್ಣಕ್ಕೆ ಬಣ್ಣವೇ ಸಾಟಿ. ಹಳದಿ, ಕೇಸರಿ, ಹಸಿರು, ಕೆಂಪು, ನೀಲಿ, ಗುಲಾಬಿ, ಬಿಳಿ, ಕಪ್ಪು, ಗಿಳಿಹಸಿರು ಸೇರಿದಂತೆ 10 ಬಣ್ಣಗಳಿಂದ ಕೂಡಿದ ಬಣ್ಣದ ಡಬ್ಬಗಳು ವಿಶೇಷ ಗಮನ ಸೆಳೆಯುತ್ತಿವೆ. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಬಣ್ಣವೂ ಉತ್ತಮವಾದ ಬಣ್ಣ ಎಂದು ಹೇಳಲಾಗುವುದಿಲ್ಲ. ಮೈ ಹಾಗೂ ಕಣ್ಣುಗಳಿಗೆ ಹಾನಿಯನ್ನುಂಟು ಮಾಡುವ ಬಣ್ಣಗಳು ಸಾಕಷ್ಟಿವೆ. ಹೀಗಾಗಿ ಬಣ್ಣಗಳ ಆಯ್ಕೆಯಲ್ಲಿ ಎಚ್ಚರ ವಹಿಸುವುದು ಅಗತ್ಯವಾಗಿದೆ ಎನ್ನುತ್ತಾರೆ ವ್ಯಾಪಾರಿಯೊಬ್ಬರು.
ಮಾ. 7ರಂದು ಹೋಳಿ ಹುಣ್ಣಿಮೆ. ಹುಣ್ಣಿಮೆಯ ನಾಲ್ಕು ದಿನ ಮುಂಚಿತ ಆಯಾ ಓಣಿಗಳಲ್ಲಿ ಕಾಮ ದಹನದ ಸ್ಥಳ ನಿಗದಿಪಡಿಸಲಾಗುತ್ತದೆ. ಮನೆ ಮುಂದೆ, ಓಣಿಯ ಪ್ರಮುಖ ಸ್ಥಳಗಳಲ್ಲಿ ಗುಂಡಿ ತೋಡಲಾಗಿದೆ. ಹುಣ್ಣಿಮೆಯ ಮುಸ್ಸಂಜೆ ಈ ಗುಂಡಿ ಸುತ್ತಲೂ ಸಗಣಿಯಿಂದ ಸಾರಿಸಿ, ಬಣ್ಣ ಬಣ್ಣದ ರಂಗೋಲಿಯ ಚಿತ್ತಾರ ಬಿಡಿಸಿ, ಕಾಮನ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಕಟ್ಟಿಗೆ, ಸಗಣಿಯ ಕುಳ್ಳಿನಿಂದ ಕಾಮ ದಹನ ನಡೆಯಲಿದೆ. ವರ್ಷಕ್ಕೊಮ್ಮೆ ಬರುವ ಹೋಳಿ ಹುಣ್ಣಿಮೆಗಾಗಿ ಕಾತರದಿಂದ ಕಾಯುವ ಯುವ ಸಮೂಹ, ಚಿಣ್ಣರ ತಂಡ ಇದೀಗ ಹೋಳಿ ಆಚರಣೆಗಾಗಿ ಅಂತಿಮ ಸಿದ್ಧತೆ ನಡೆಸಿದೆ. ಕಾಮ ದಹನಕ್ಕೆ ಬೀದಿ ಬೀದಿ ಸುತ್ತಿ ಕಟ್ಟಿಗೆ, ಕುಳ್ಳು ಸಂಗ್ರಹಿಸಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಆಕಾಂಕ್ಷಿಗಳಿಂದಲೂ ಭರಪೂರ ಚಂದಾ ವಸೂಲಿ ಮಾಡುವ ಮೂಲಕ ಹೋಳಿಗೆ ಅದ್ದೂರಿ ಮುನ್ನುಡಿ ಬರೆದಿದೆ.
ಹಲಗೆಗೆ ಹೆಚ್ಚಿದ ಬೇಡಿಕೆ: ರಂಗಿನಾಟದ ಹೋಳಿ ಹುಣ್ಣಿಮೆ ಪ್ರಮುಖ ಆಕರ್ಷಣೆಯೇ ಹಲಗೆ. ಹೀಗಾಗಿ ಹಲಗೆಗಳಿಗೆ ಭಾರಿ ಬೇಡಿಕೆ ಬಂದಿದೆ. ಗ್ರಾಹಕರು ವಿವಿಧ ಬಗೆಯ ಹಲಗೆಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ. ನಗರದ ಹಲವೆಡೆ ಹಲಗೆಗಳ ಮಾರಾಟ ಜೋರಾಗಿದ್ದು, ಹಿಂದಿನಿಂದಲೂ ಚರ್ಮದ ಹಲಗೆಗೆ ಬೇಡಿಕೆ ಹೆಚ್ಚಿದ್ದು, ಈ ಬಾರಿ ಫೈಬರ್, ಪ್ಲಾಸ್ಟಿಕ್ ತಮಟೆಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಇದರಿಂದಾಗಿ ಮಾರಾಟಗಾರರು ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಕಲರಗನ್‌ಗಳ ಅಬ್ಬರ: ಇನ್ನು ಮಾರುಕಟ್ಟೆಗೆ ದಾಂಗುಡಿಯಿಟ್ಟಿರುವ ಪಿಚಕಾರಿ, ಕಲರಗನ್, ಲೆದರ್ ಮಾಸ್ಕ್, ಬಣ್ಣ ಖರೀದಿಸಿ, ಬಣ್ಣದೋಕುಳಿಯಲ್ಲಿ ಮಿಂದೇಳುವ ಸಂಭ್ರಮದ ಕ್ಷಣಕ್ಕಾಗಿ ಕಾತರ ಹೆಚ್ಚಾಗಿದೆ. ಬಣ್ಣದಾಟಕ್ಕಾಗಿಯೇ ನಗರದ ಗಣಪತಗಲ್ಲಿ, ಪಾಂಗುಳಗಲ್ಲಿ, ಕಿರ್ಲೋಸ್ಕರ್ ರಸ್ತೆಯಲ್ಲಿ ವಿವಿಧ ಬಗೆಯ ವೇಷಭೂಷಣಗಳ ಮಾರಾಟ ನಡೆದಿದ್ದು, ವಿವಿಧ ಆಕರ್ಷಕ ಬಣ್ಣಗಳ ಪಿಚಕಾರಿಗಳು, ಬಣ್ಣ ತುಂಬಲು ಬಲೂನ್‌ಗಳು ಹಾಗೂ ವಿವಿಧ ಬಣ್ಣಗಳ ಹೊಗೆ ಬರುವಂತ ಫಾಗ್ ಸ್ಟಿಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಬಣ್ಣಗಳನ್ನು ಕೇಜಿಗಟ್ಟಲೇ ಹಾಗೂ ಪ್ಯಾಕೇಟಿನಿಂದ ಖರೀದಿಸುತ್ತಿರುವುದು ಕಂಡುಬಂದಿದ್ದು, 10 ರೂ.ದಿಂದ 500ರೂ.ವರೆಗೆ ಬಣ್ಣಗಳ ಪ್ಯಾಕೇಟ್‌ಗಳಿದ್ದು, ಪಿಚಕಾರಿಗಳು ಸೇರಿ ಇನ್ನಿತರ ವಸ್ತುಗಳು 30ರೂ.ದಿಂದ 2000ರೂ.ವರೆಗೆ ದರವಿದೆ.