ಜೊಯಿಡಾ: ತಾಲೂಕಿನ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಪ್ರಾರಂಭವಾಗಿ ಐದು ವರ್ಷ ಕಳೆಯುತ್ತಿದ್ದರೂ ಇದುವರೆಗೆ ಉದ್ಘಾಟನೆಗೊಂಡು ಸಾರ್ವಜನಿಕರ ಸೇವೆಗೆ ತೆರೆದುಕೊಂಡಿಲ್ಲ. ಒಂದು ಹಂತದ ಬಹುತೇಕ ಕಾಮಗಾರಿ ಪೂರ್ಣಗೊಂಡು ಒಂದು ವರ್ಷ ಕಳೆದರೂ ಈ ಹೊಸ ಕಟ್ಟಡ ಕಂದಾಯ ಇಲಾಖೆಗೆ ಲಭಿಸದೆ ಹಳೆಯ ಕಟ್ಟಡದಲ್ಲಿಯೇ ಎಲ್ಲ ಕಚೇರಿಗಳು ಮುಂದುವರಿಯುವಂತಾಗಿದೆ.
ಎಲ್ಲ ಕಚೇರಿಗಳು ಒಂದೆಡೆ ಇದ್ದು ಸಾರ್ವಜನಿಕರಿಗೆ ಅನುಕೂಲವಾಗಲು ಈ ಮಿನಿ ವಿಧಾನಸೌಧ ಕಟ್ಟಡವನ್ನು
ಆರ್.ವಿ. ದೇಶಪಾಂಡೆ ಅವರು ಉಸ್ತು ವಾರಿ ಸಚಿವರಾಗಿದ್ದಾಗ ಮಂಜೂರು ಮಾಡಿಸಿದ್ದರು. 5 ಕೋಟಿ ರೂಪಾಯಿ ಅನುದಾನವು ದೊರೆತಿತ್ತು. 2016 ಮತ್ತು 17ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಆದ ನಂತರ ಗುತ್ತಿಗೆದಾರರಿಂದ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ನಿಧಾನ ಗತಿಯಲ್ಲಿ ಕಾಮಗಾರಿ ನಡೆಯು ತ್ತಿದ್ದು, ಕಳೆದ ವರ್ಷವೇ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಕಟ್ಟಡಕ್ಕೆ ಬಣ್ಣ ಬಳಿದು ಇನ್ನೇನು ಕಚೇರಿಗಳೂ ಪ್ರಾರಂಭವಾಗುತ್ತವೆ ಎನ್ನಿಸಿತ್ತು. ಆದರೆ, ಸಾರ್ವಜನಿಕರ ನಿರೀಕ್ಷೆ ಮಾತ್ರ ಹುಸಿಯಾಗಿದೆ. ಕಟ್ಟಡದ ಬಣ್ಣ ಮಸುಕಾಗುತ್ತ ಬಂದರೂ ಇದುವರೆಗೆ ಉದ್ಘಾಟನೆಯಾಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಈ ಕಟ್ಟಡ ಅತಿ ಶೀಘ್ರದಲ್ಲಿ ಉದ್ಘಾಟನೆಗೊಂಡು ತಾಲೂಕು ಆಡಳಿತದ ಎಲ್ಲ ಕಚೇರಿಗಳು ಆರಂಭಗೊಳ್ಳಬೇಕು. ಆ ಮೂಲಕ ಸಾರ್ವಜನಿಕ ಸೇವೆಗೆ ಲಭ್ಯವಾಗಬೇಕು ಎನ್ನುವುದು ತಾಲೂಕಿನ ಜನತೆಯ ಆಶಯವಾಗಿದೆ.
ಮಿನಿ ವಿಧಾನಸೌಧದ ಮೊದಲನೇ ಹಂತದ ಕಾಮಗಾರಿ ಪೂರ್ಣಗೊಂಡಿದೆ. ವಿದ್ಯುತ್ ಸಂಪರ್ಕ ನೀಡಲು ಟ್ರಾನ್ಸ್ ಫಾರ್ಮರ್ ಅಳವಡಿಸಿ ಮೀಟರ್ ಸಂಪರ್ಕ ನೀಡಬೇಕಿದೆ. ಎರಡನೇ ಹಂತದಲ್ಲಿ ಇನ್ನೊಂದು ಅಂತಸ್ತಿನ ಕಟ್ಟಡ ಕಾಮಗಾರಿ ಮತ್ತು ಪೀಠೋಪಕರಣಗಳ ಬಗ್ಗೆ 393 ಲಕ್ಷ 22 ಸಾವಿರ ರೂಪಾಯಿಗಳ ಅನುದಾನದ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ.| ಅರುಣ ಡಿ. ಇಂಜಿನಿಯರ್, ಲೋಕೋಪಯೋಗಿ ಇಲಾಖೆ