ಸಕಲೇಶಪುರ: ಯಾವುದೇ ಅಡ್ಡ ಪರಿಣಾಮವಿಲ್ಲದೆ ಬಣ್ಣ ಥೆರಪಿಯ ಮೂಲಕ ರೋಗಗಳನ್ನು ಗುಣಪಡಿಸಿ, ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯ ಎಂದು ಬಸವ ಅಕಾಡೆಮಿಯ ಹೀಲರ್ ಸಾ.ಸು.ವಿಶ್ವನಾಥ್ ತಿಳಿಸಿದರು.
ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಬಸವ ಅಕಾಡೆಮಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಆರೋಗ್ಯ ಉಚಿತ ಶಿಬಿರದಲ್ಲಿ ಮಾತನಾಡಿ, ಬಣ್ಣಗಳ ಮಾಯಾಲೋಕ, ಅಂಗೈಯಲ್ಲಿ ಆರೋಗ್ಯ ಎನ್ನುವುದು ಅಕಾಡೆಮಿಯ ಧ್ಯೇಯವಾಗಿದೆ. ಇಂದಿನ ಜನರು ಔಷಧಗಳ ಮೇಲೆ ಅವಲಂಬಿತರಾಗಿ ತಮ್ಮ ದೇಹದ ರಕ್ಷಣಾಶಕ್ತಿಯನ್ನು (ಇಮ್ಯೂನಿಟಿ) ಕಡಿಮೆ ಮಾಡಿಕೊಂಡಿದ್ದಾರೆ. ಗುಳಿಗೆಯಿಲ್ಲದ ಚಿಕಿತ್ಸೆಯ ಮೂಲಕ ದೇಹದ ಇಮ್ಯೂನಿಟಿಯನ್ನು ಹೆಚ್ಚಿಸಬಹುದು.
ರಾಜ್ಯಾದ್ಯಂತ ಬಣ್ಣ ಥೆರಪಿಯ ಕುರಿತು ಜಾಗೃತಿ ಮೂಡಿಸಲು ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಮೈಗ್ರೇನ್, ಹೃದಯ ಸಂಬಂಧಿತ ಸಮಸ್ಯೆ, ಥೈರಾಯ್ಡ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೂ ಈ ವಿಧಾನದಿಂದ ಪರಿಹಾರ ದೊರೆಯುತ್ತಿದೆ ಎಂದರು.
ಅಕಾಡೆಮಿಯ ಹೀಲರ್ ಚಾಂದಿನಿ ಪರಮೇಶ್ ಮಾತನಾಡಿ, ಇಂದಿನ ಜನರು ಔಷಧ ಸೇವನೆಯ ಮೂಲಕ ಮಾತ್ರ ಆರೋಗ್ಯ ಸಾಧಿಸಬಹುದು ಎಂಬ ನಂಬಿಕೆ ಹೊಂದಿದ್ದಾರೆ. ಆದರೆ ಪ್ರಾಚೀನ ಭಾರತೀಯ ವೈದ್ಯ ಪದ್ಧತಿಯಲ್ಲಿ ಬಣ್ಣ ಮತ್ತು ಆಕ್ಯುಪ್ರೆಶರ್ ಮೂಲಕವೂ ಆರೋಗ್ಯ ಸುಧಾರಣೆ ಸಾಧ್ಯ. ಅಕಾಡೆಮಿಯ ಸಂಸ್ಥಾಪಕ ಬಸವರಾಜ್ ಕಳೆದ 15 ವರ್ಷಗಳಿಂದ ಈ ವಿಷಯದಲ್ಲಿ ಸಂಶೋಧನೆ ನಡೆಸಿ, ಜನರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುತ್ತಿದ್ದಾರೆ ಎಂದು ಹೇಳಿದರು.
ಪಲ್ಸ್ ಟೆಕ್ನಾಲಜಿಯ ಮೂಲಕ ದೇಹದ ವ್ಯತ್ಯಾಸಗಳು, ವಾತ ಪಿತ್ತ ಕಫದ ಅಸಮತೋಲನ ಹಾಗೂ ಅಂಗಾಂಗಗಳ ದುರ್ಬಲತೆಗಳನ್ನು ಗುರುತಿಸಲು ಸಾಧ್ಯ. ಜತೆಗೆ ಆಹಾರ ಕ್ರಮ, ದಿನಚರಿ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ತರಲು ಮಾರ್ಗದರ್ಶನ ನೀಡಲಾಗುತ್ತದೆ ಎಂದರು.
ಸಕಲೇಶಪುರದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಈ ಶಿಬಿರದ ಉಪಯೋಗವನ್ನು ಸುಮಾರು 900 ಮಂದಿ ಪಡೆದರು.
ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ, ಶಾಸಕ ಸಿಮೆಂಟ್ ಮಂಜು ಅವರ ಪತ್ನಿ ಪ್ರತಿಭಾ, ಹೀಲರ್‌ಗಳಾದ ಸುಬ್ರಮಣ್ಯ, ಯೋಗೇಶ್ ಮತ್ತಿತರರು ಉಪಸ್ಥಿತರಿದ್ದರು.