ಜಿಲ್ಲೆ

ಬಡಾವಣೆಗಳಲ್ಲಿ ಸೋಂಕಿತರ ಚಿಕಿತ್ಸೆ ಬೇಡ

ಚಿಕ್ಕಬಳ್ಳಾಪುರ : ಕರೊನಾ ಹೊಸ ಪ್ರಕರಣಗಳ ದಿನೇದಿನೆ ಹೆಚ್ಚುತ್ತಿರುವುದರಿಂದ ಸರ್ಕಾರಿ ಆಸ್ಪತ್ರೆಗಳ ಮೇಲೆ ಉಂಟಾಗುತ್ತಿರುವ ಒತ್ತಡ ನಿಭಾಯಿಸಲು ಖಾಸಗಿ ಆಸ್ಪತ್ರೆಗಳ ನೆರವು ಪಡೆಯಲು ಮುಂದಾಗಿರುವ ಜಿಲ್ಲಾಡಳಿತದ ನಿರ್ಧಾರಕ್ಕೆ ಖಾಸಗಿ ಆಸ್ಪತ್ರೆಗಳ ಸುತ್ತಲಿನ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ.

ಜನವಸತಿ ಪ್ರದೇಶಗಳಲ್ಲಿನ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರನ್ನು ದಾಖಲಿಸದಂತೆ ಒತ್ತಾಯಗಳು ಕೇಳಿ ಬರುತ್ತಿದ್ದು, ಇದರ ಭಾಗವಾಗಿ ಜಿಲ್ಲಾಕೇಂದ್ರದಲ್ಲಿನ ದೊಡ್ಡ ಭಜನೆ ಮನೆ ರಸ್ತೆಯಲ್ಲಿರುವ ಮಂಜುನಾಥ ಖಾಸಗಿ ಆಸ್ಪತ್ರೆಯನ್ನು ಕರೊನಾ ಚಿಕಿತ್ಸಾ ಕೇಂದ್ರವನ್ನಾಗಿಸುವ ನಿರ್ಧಾರವನ್ನು ಕೈ ಬಿಡಬೇಕು ಎಂದು ಸ್ಥಳೀಯರು ಶನಿವಾರ ಜಿಲ್ಲಾಧಿಕಾರಿ ಆರ್.ಲತಾಗೆ ಮನವಿ ಸಲ್ಲಿಸಿದ್ದಾರೆ.

ಮಂಜುನಾಥ ಆಸ್ಪತ್ರೆಯ ಸುತ್ತಲು 500 ಕ್ಕೂ ಹೆಚ್ಚಿನ ಮನೆಗಳಿವೆ. ಸ್ಥಳೀಯವಾಗಿ 3 ಸಾವಿರ ಮಂದಿ ಇದ್ದು ಚಿಕ್ಕಮಕ್ಕಳು, ವೃದ್ಧರು, ಮಹಿಳೆಯರು ಸೇರಿ ಹೆಚ್ಚಿನ ಜನರು ಆಸ್ಪತ್ರೆಯ ಮುಂಭಾಗದಲ್ಲಿ ಓಡಾಡುತ್ತಾರೆ, ಈ ಹಿನ್ನೆಲೆಯಲ್ಲಿ ಕರೊನಾ ಚಿಕಿತ್ಸೆ ಕೇಂದ್ರವನ್ನಾಗಿ ಗುರುತಿಸುವಲ್ಲಿ ಮಂಜುನಾಥ್ ಆಸ್ಪತ್ರೆಗೆ ವಿನಾಯಿತಿ ನೀಡಬೇಕು ಹಾಗೂ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸ್ಥಳೀಯರಾದ ಸಿ.ನಾರಾಯಣಸ್ವಾಮಿ, ಎನ್.ಹರೀಶ್ ಬಾಬು, ಎಸ್.ಗಜೇಂದ್ರ, ಮಹಾವೀರ್ ಕುಮಾರ್, ಕಮಲಭಾಯಿ, ಗುಲಾಬ್ ಭಾಯಿ, ಜೀತೇಂದ್ರ ಕುಮಾರ್, ಭಾಗ್ಯಮ್ಮ, ಮಂಜುನಾಥ್ ರೆಡ್ಡಿ, ಭಾರ್ಗವ್, ನೇತ್ರಾ ಮತ್ತಿತರರು ಇದ್ದರು.