ಕೊಳ್ಳೇಗಾಲ: ಸಮಾಜ ಕಟ್ಟ ಕಡೆಯ ವ್ಯಕ್ತಿಯ ಬದುಕು ಹಸನಾಗಬೇಕೆಂಬ ಉದ್ದೇಶದಡಿ ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ನಗರಸಭೆ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ನಗರೋತ್ಥಾನ 4ನೇ ಹಂತ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದರು. ಬಡವರು, ರೈತರು, ಕೂಲಿ ಕಾರ್ಮಿಕರು ಆರ್ಥಿಕವಾಗಿ ಸಬಲರಾಗಬೇಕು. ಇವರ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕೆಂಬ ಉದ್ದೇಶದಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ನಗರಸಭೆ ವತಿಯಿಂದ ಇಂದು ಆಯೋಜಿಸಿರುವ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ಐತಿಹಾಸಿಕವಾದದ್ದು ಎನ್ನಬಹುದು ಎಂದರು. ಏಕೆಂದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಸುಮಾರು 235 ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಗುತ್ತಿದೆ. 1 ಯಂತ್ರದ ಬೆಲೆ 8 ಸಾವಿರ, ಒಟ್ಟು 20 ಲಕ್ಷ ರೂ. ವೆಚ್ಚದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಮಾತನಾಡಿ, ದುಡಿಯುವ ಕೈಗಳಿಗೆ ಹೊಲಿಗೆ ಯಂತ್ರ ನೀಡಿದ್ದೇವೆ. ಮನೆಯಲ್ಲಿ ಇಟ್ಟು ಕೊಂಡು ವ್ಯರ್ಥ ಮಾಡದಿರಿ. ಇದರ ಸದುಪಯೋಗ ಪಡೆದುಕೊಳ್ಳುವುದ್ದರಿಂದ ಆರ್ಥಿಕ ಸ್ವಾವಲಂಬನೆ ಸಾಧ್ಯ ಎಂದರು. ಕೊಳ್ಳೇಗಾಲ ಸುಂದರ ಪಟ್ಟಣ, ಜನರದ್ದು ಪರಿಶುದ್ಧವಾದ ಮನಸ್ಸು. ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ಅಭಿವೃದ್ಧಿ ವಾಹನದ ಎರಡು ಬಂಡಿಯಿದಂತೆ ಸಮನ್ವತೆಯಿಂದ ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯ. ನಗರಸಭೆ ಎಂದರೆ ಸಮಸ್ಯೆ ಇದ್ದೆ ಇರುತ್ತದೆ. ಖಾತೆ, ಸ್ವಚ್ಛತೆ ಇನ್ನಿತರ ಕೆಲಸಗಳು ಅಕ್ರಮ ಮುಕ್ತವಾಗಿ ನಡೆಯಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಬಸವರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶ ಇಇ ಮಹಮ್ಮದ್ ಅಲ್ತಾಫ್, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಪೌರಾಯುಕ್ತ ಎ.ರಮೇಶ್ ಹಾಗೂ ಸದಸ್ಯರು, ಫಲಾನುಭವಿಗಳು, ಇತರರು ಇದ್ದರು.