ಚಿಕ್ಕಮಗಳೂರಿನ ಜಿಲ್ಲಾ ಗ್ರಾಮೀಣ ಕೈಗಾರಿಕಾ ಉಪನಿರ್ದೇಶಕರ ಕಚೇರಿಯಲ್ಲಿ ವೃತ್ತಿಪರ ಕುಶಲಕರ್ಮಿ ಯೋಜನೆಯಡಿ ಶಾಸಕ ಎಚ್.ಡಿ.ತಮ್ಮಯ್ಯ ಅವರು ಅರ್ಹ ಫಲಾನುಭವಿಗಳಿಗೆ ವಿವಿಧ ಸೌಲತ್ತುಗಳನ್ನು ವಿತರಿಸಿದರು. ಸಿ.ಎಂ.ಮಹೇಶ್ ಕುಮಾರ್, ಎನ್.ಚಂದ್ರಶೇಖರ್, ಇ.ಇ.ಅಶೋಕ್ ಮತ್ತಿತರರಿದ್ದರು.  
ಜಿಲ್ಲೆ

ಬಡವರು, ಕಾರ್ಮಿಕರು, ಶ್ರಮಿಕರ ಪರವಾಗಿ ಯೋಜನೆ ಜಾರಿ

ಚಿಕ್ಕಮಗಳೂರು: ರಾಜ್ಯ ಸರ್ಕಾರ ಹಿಂದುಳಿದವರು, ಬಡವರವರು, ಶ್ರಮಿಕರು, ಕಾರ್ಮಿಕರ ಹಾಗೂ ರೈತರ ಪರವಾಗಿ ಯೋಜನೆಗಳನ್ನು ಜಾರಿಗೆ ತಂದು ಅವುಗಳನ್ನು ಅನುಷ್ಠಾನ ಮಾಡಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.

ನಗರದ ಜಿಲ್ಲಾ ಗ್ರಾಮೀಣ ಕೈಗಾರಿಕಾ ಉಪನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ವೃತ್ತಿಪರ ಕುಶಲಕರ್ಮಿ ಯೋಜನೆಯಡಿ ವಿವಿಧ ಸೌಲತ್ತುಗಳನ್ನು ವಿತರಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ಫಲಾನುಭವಿಗೆ ೮ ಸಾವಿರ ರೂ. ಮೌಲ್ಯದ ಗಾರೆ ಕೆಲಸ, ಮರಗೆಲಸ, ಮಡಿವಾಳ, ಸವಿತಾ ಸಮಾಜ, ಕಮ್ಮಾರಿಕೆ ಮುಂತಾದ ಕಸುಬಿನ ಉಪಕರಣಗಳನ್ನು ಚಿಕ್ಕಮಗಳೂರು ತಾಲೂಕಿನ ೧೬೬ ಮಂದಿ ಫಲಾನುಭವಿಗಳಿಗೆ ೧೩,೨೮,೦೦೦ ರೂ. ಮೌಲ್ಯದ ಉಪಕರಣಗಳನ್ನು ವಿತರಿಸುತ್ತಿರುವುದಾಗಿ ಹೇಳಿದರು.

ಇಂದು ಈ ಸವಲತ್ತುಗಳನ್ನು ಪಡೆದ ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಎಲ್ಲರೂ ಆರ್ಥಿಕವಾಗಿ ಸದೃಢರಾಗುವ ಜೊತೆಗೆ ವೃತ್ತಿಪರ ಗೌರವವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

ಮನುಷ್ಯನಿಗೆ ದೇಹದ ಅಂಗಾAಗಗಳು ಎಷ್ಟು ಮುಖ್ಯವೋ ಅದೇ ರೀತಿ ದೇಶದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿ ಒಂದಲ್ಲಾ ಒಂದು ರೀತಿಯ ವೃತ್ತಿಯನ್ನು ಕೈಗೊಂಡಾಗ ಮಾತ್ರ ಅದೊಂದು ಸಮಗ್ರ ದೇಶ, ರಾಜ್ಯ, ಊರು ಆಗಲು ಸಾಧ್ಯ ಎಂದು ಹೇಳಿದರು.

ಪ್ರತಿಯೊಬ್ಬರೂ ಕೈಗೊಳ್ಳುವ ಅವರದೇ ಆದ ವೃತ್ತಿ ಕೌಶಲ್ಯಗಳು ಶ್ರೇಷ್ಠವಾಗಿದ್ದು, ತಮ್ಮ ವೃತ್ತಿಯಲ್ಲಿ ದುಡಿದು ಗಳಿಸಿದ ಹಣವನ್ನು ಅನಾವಶ್ಯಕವಾಗಿ ವ್ಯಯ ಮಾಡದೆ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿದಾಗ ಅತ್ಯಂತ ಶ್ರೇಷ್ಟವಾಗುತ್ತದೆ ಎಂದು ತಿಳಿಸಿದರು.

ಮದುವೆಯನ್ನು ವಿಜೃಂಭಣೆಯಿAದ ಅದ್ದೂರಿಯಾಗಿ ಮಾಡದಿದ್ದರೂ ಪರವಾಗಿಲ್ಲ ಇದಕ್ಕೆ ಬಳಸುವ ಹಣದಲ್ಲಿ ಮನೆಯನ್ನು ನಿರ್ಮಿಸಿಕೊಳ್ಳಿ. ಬಡ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಹಲವು ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಂಡರೆ ಕಾರ್ಮಿಕರ ಮಕ್ಕಳ ಭವಿಷ್ಯ ಉಜ್ವಲಗೊಳ್ಳುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿ.ಎಂ. ಮಹೇಶ್ ಕುಮಾರ್, ಗ್ರಾಮೀಣ ಕೈಗಾರಿಕೆಗಳ ಉಪನಿರ್ದೇಶಕ ಎನ್. ಚಂದ್ರಶೇಖರ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಇ.ಇ.ಅಶೋಕ್ ಹಾಗೂ ಗ್ರಾಮೀಣ ಕೈಗಾರಿಕೆ ಇಲಾಖೆ ಸಿಬ್ಬಂದಿ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.