ಎಚ್.ಡಿ.ಕೋಟೆ ಪಟ್ಟಣದ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸರ್ಕಾರದ ವಿವಿಧ ಇಲಾಖೆಯ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಶಾಸಕ ಅನಿಲ್ ಚಿಕ್ಕಮಾದು ಉದ್ಘಾಟಿಸಿದರು. 
ಜಿಲ್ಲೆ

ಬಡವರಿಗೆ ಸೌಲಭ್ಯ ತಲುಪಿಸಲು ಪ್ರಾಮಾಣಿಕ ಪ್ರಯತ್ನ

ಎಚ್.ಡಿ.ಕೋಟೆ: ಶಾಸಕ ಸ್ಥಾನದ ಐದು ವರ್ಷದ ಅವಧಿಯಲ್ಲಿ ನಿಜವಾದ ಬಡವರಿಗೆ ಸರ್ಕಾರದ ಸೌಲಭ್ಯ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಸೋಮವಾರ 59.34 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಯಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ನನ್ನ ಮತ್ತು ನನ್ನ ತಂದೆಯವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ಜನತೆಗೆ ನಮ್ಮ ಕುಟುಂಬ ಸದಾ ಋಣಿಯಾಗಿರಲಿದೆ ಎಂದರು.

ದಿ.ಧ್ರುವನಾರಾಯಣ ಅವರ ಮಾರ್ಗದರ್ಶನದಲ್ಲಿ ತಾಲೂಕಿನ ಅಭಿವೃದ್ಧಿ ಕೆಲಸ ಮಾಡಿದ್ದೇನೆ. 380 ಹಳ್ಳಿ, 120 ಹಾಡಿಗಳಿಂದ ಕೂಡಿರುವ ಕ್ಷೇತ್ರ ದೊಡ್ಡದಾಗಿದ್ದು, ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಿ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ನನ್ನ ಬಗ್ಗೆ ವಿರೋಧ ಮಾಡುತ್ತಿದ್ದವರಿಗೆ ಅಭಿವೃದ್ಧಿ ಕೆಲಸಗಳ ಮೂಲಕವೇ ತಕ್ಕ ಉತ್ತರ ನೀಡಿದ್ದೇನೆ ಎಂದು ತಿಳಿಸಿದರು.

ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಶ್ರೀ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಉಪಕರಣ, ಶೇ.70ರಷ್ಟು ರಿಯಾಯಿತಿ ದರದಲ್ಲಿ 20 ಯುವಕರಿಗೆ ದ್ವಿಚಕ್ರ ವಾಹನಗಳು, ಸರಗೂರು ತಾಲೂಕಿನ 53 ರೈತ ಕುಟುಂಬಕ್ಕೆ ಸಾಗುವಳಿ ಹಕ್ಕುಪತ್ರ ವಿತರಣೆ ಮಾಡಲಾಯಿತು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ತಾಲೂಕು ಉಪ ವಿಭಾಗದ ಮೂರು ಕಚೇರಿಗಳು, ಗ್ರಾಮಾಂತರ ಭಾಗಗಳಲ್ಲಿ ನಿರ್ಮಾಣ ಮಾಡಿರುವ ನಾಲ್ಕು ಅಂಬೇಡ್ಕರ್ ಭವನ ಹಾಗೂ ಎರಡು ವಾಲ್ಮೀಕಿ ಭವನಗಳು, ನಾಲ್ಕು ಅಂಗನವಾಡಿ ಕಟ್ಟಡ, ಲೋಕೋಪಯೋಗಿ ಇಲಾಖೆಯ 5 ಕೋಟಿ ರೂ. ವೆಚ್ಚದ ತೊರವಳ್ಳಿ ಗ್ರಾಮದ ಬಳಿ ಇರುವ ಮೈಸೂರು- ಕೋಟೆ ಸಂಪರ್ಕ ಸೇತುವೆ, ಪಶುಪಾಲನಾ ಇಲಾಖೆಯ ಕಂಚುಮಳ್ಳಿ ಮತ್ತು ಹಂಪಾಪುರ ಪಶು ಆಸ್ಪತ್ರೆ, ಶಿಕ್ಷಣ ಇಲಾಖೆಯ 38 ಶಾಲೆಯ 76 ಕೊಠಡಿ ಉದ್ಘಾಟನೆ ಮಾಡಲಾಯಿತು.

ಪುರಸಭಾ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ಮಧು, ಪ್ರೇಮ್, ಮೈಮುಲ್ ನಿರ್ದೇಶಕ ಈರೇಗೌಡ, ತಹಸೀಲ್ದಾರ್ ಮಹೇಶ್, ಅಧಿಕಾರಿಗಳಾದ ಉದಯಕುಮಾರ್, ರಂಗಸ್ವಾಮಿ, ನಾಗರಾಜು, ಬೋರಯ್ಯ, ಅಶೋಕ್, ಸೌಮ್ಯಾ, ರಾಜು, ಶ್ರೀನಿವಾಸ್, ಶಂಭುಲಿಂಗನಾಯಕ, ಡಾ.ಪೂರ್ಣನಂದ, ಡಾ.ರವಿಕುಮಾರ್, ಆಶಾ, ಚಂದು ಕುಮಾರ್, ನಾರಾಯಣಸ್ವಾಮಿ, ರಾಮಸ್ವಾಮಿ, ಗೋವಿಂದ ನಾಯಕ, ಸಣ್ಣರಾಮಪ್ಪ, ಮುಖಂಡರಾದ ಚಿಕ್ಕವೀರನಾಯಕ, ಶಂಭುಲಿಂಗನಾಯಕ, ಅಶೋಕ್, ಕ್ಯಾತನಹಳ್ಳಿ ನಾಗರಾಜು ಇದ್ದರು.