ಉಡುಪಿ: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಬಡವರಿಗೆ ನೆರವು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ನಾನಾ ಭಾಗಗಳಲ್ಲಿ ತಂದೆ&ತಾಯಿಯ ಹೆಸರಿನಲ್ಲಿ ಮನೆಗಳನ್ನು ನಿರ್ಮಿಸಿ ನೆಮ್ಮದಿಯ ಬದುಕು ಕಟ್ಟಿಕೊಡಲಾಗುತ್ತಿದೆ. ಬಡವರಿಗೆ ಸಹಾಯಹಸ್ತ ಚಾಚುವುದು ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಸಮಾನ ಮನಸ್ಕರ ತಂಡದ ವತಿಯಿಂದ ಕುಂಜಿಬೆಟ್ಟು ಡಿಸಿಎಂ ಕಾಲೊನಿ ನಿವಾಸಿ ಬೇಬಿ ಸಾಲಿಯಾನ್ ಅವರಿಗೆ ನಿರ್ಮಿಸಿಕೊಟ್ಟ ಮನೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಪರ ಜಿಲ್ಲಾಧಿಕಾರಿ ಮಮತಾದೇವಿ ಮಾತನಾಡಿ, ಸರ್ಕಾರದಿಂದ ವಸತಿ ರಹಿತರಿಗೆ ಅನೇಕ ಸೌಲಭ್ಯಗಳು ಲಭಿಸುತ್ತಿದ್ದು, ಸಮಾನ ಮನಸ್ಕರ ತಂಡ ದಾನಿಗಳ ನೆರವಿನಿಂದ 24 ಮನೆಗಳನ್ನು ನಿರ್ಮಿಸಿದ್ದು, ಇತರ ಸಂ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.
ಸಾಲ್ಯ ಟ್ರಸ್ಟ್ ಪ್ರವರ್ತಕಿ ನಿರುಪಮಾ ಪ್ರಸಾದ್ ಶೆಟ್ಟಿ, ಚಿನ್ನ&ಬೆಳ್ಳಿ ಕೆಲಸಗಾರರ ಸಂದ ಅಧ್ಯಕ್ಷ ರವಿಚಂದ್ರ ಆಚಾರ್ಯ, ದಾನಿ ಶ್ರೀನಿವಾಸ ರಾವ್, ಸಮಾನ ಮನಸ್ಕರ ತಂಡದ ಸಂಚಾಲಕ ಶಶಿಧರ್ ಪುರೋಹಿತ್ ಉಪಸ್ಥಿತರಿದ್ದರು. ವೆಂಕಟೇಶ ಆಚಾರ್ಯ ಸ್ವಾಗತಿಸಿ, ಪ್ರತಿಮಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.