ರಾಮನಗರ: ಹೆದ್ದಾರಿಯಲ್ಲಿ ವಾಹನ ಸವಾರರಿಗೆ ದಂಡ ವಸೂಲಿ ಮೂಲಕ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ದೂರಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪೊಲೀಸರನ್ನು ತರಾಟೆ ತೆಗೆದುಕೊಂಡ ಪ್ರಸಂಗ ಸೋಮವಾರ ನಡೆಯಿತು.
ಚನ್ನಪಟ್ಟಣದಲ್ಲಿ ಕಾರ್ಯಕ್ರಮ ಮುಗಿಸಿ ಬಿಡದಿಗೆ ವಾಪಸಾಗುವ ವೇಳೆ ರಾಮನಗರದಲ್ಲಿ ತಡೆದ ಕಾರ್ಯಕರ್ತರು, ರೈತರು ಮತ್ತು ಬಡವರು ಎನ್ನದೆ ಪೊಲೀಸರು ಸಾವಿರಾರು ರೂ ದಂಡ ವಿಧಿಸುತ್ತಿದ್ದಾರೆ. ಹಲವಾರು ಕಡೆ ತಪಾಸಣೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು. ಈ ವೇಳೆ ಪೊಲೀಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಎಚ್‌ಡಿಕೆ, ರೈತರಿಗೆ, ಬಡವರಿಗೆ ಯಾಕೆ ತೊಂದರೆ ಕೊಡುತ್ತೀರಿ? ಇಂದಿನ ಪರಿಸ್ಥಿತಿಯಲ್ಲಿ 500, ಸಾವಿರ ರೂ.ಗಳನ್ನು ಅವರು ಎಲ್ಲಿಂದ ತಂದು ಕಟ್ಟುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸ್ ಸಿಬ್ಬಂದಿ, ರೈತರಿಗೆ ಬಡವರಿಗೆ ಕಿರುಕುಳ ನೀಡುತ್ತಿಲ್ಲ, ಯಾವುದೇ ದಂಡವನ್ನು ವಿಧಿಸುತ್ತಿಲ್ಲ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದರಾದರೂ, ಸುಮ್ಮನಾಗದ ಎಚ್‌ಡಿಕೆ, ಸಂಬಳ ತೆಗೆದುಕೊಳ್ಳುತ್ತೀರಿ ನಾಚಿಕೆ ಆಗುವುದಿಲ್ಲವೇ ಎಂದರು.
ನಮಗೆ ಮೇಲಿನ ಅಧಿಕಾರಿಗಳ ಸೂಚನೆ ಇದೆ, ಈ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಸಿದವರ ವಿರುದ್ಧವಷ್ಟೇ ದಂಡ ಹಾಕುತ್ತಿದ್ದೇವೆ ಎಂದಾಗ, ಈಗ ಎರಡನೇ ಬಾರಿಗೆ ಎಚ್ಚರಿಕೆ ನೀಡುತ್ತಿದ್ದೇನೆ, ದಂಡ ಹಾಕುವುದನ್ನು ನಿಲ್ಲಿಸದಿದ್ದರೆ ರೈತರು ಹಾಗೂ ಬಡವರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ವಿಧಾನಸಭೆಯಲ್ಲಿಯೇ ಚರ್ಚೆ ಮಾಡುತ್ತೇನೆ ಎಂದು ಎಚ್ಚರಿಕೆಯನ್ನು ನೀಡಿದರು.