ಆನೇಕಲ್: ರೈತರ ರಕ್ತ ಹಿಂಡಿ ಯಾರ ಕುಟುಂಬವೂ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಇದನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು ಎಂದು ಸಚಿವ ವಿ.ಸೋಮಣ್ಣ ಸಲಹೆ ನೀಡಿದರು.
ತಾಲೂಕಿನ ಇಂಡ್ಲವಾಡಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡುತ್ತಿರುವ ಸೂರ್ಯನಗರ 4ನೇ ಹಂತದ ಕಾಮಗಾರಿ ವಿಚಾರದಲ್ಲಿ ರೈತರು ಹಾಗೂ ಹೌಸಿಂಗ್ ಬೋರ್ಡ್ ಅಧಿಕಾರಿಗಳ ನಡುವೆ ಗಲಾಟೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಜಿಗಣಿಯ ಪ್ರಶಾಂತಿ ಕುಟೀರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಮನುಷ್ಯನಿಗೆ ಮಾನವೀಯತೆ ದೊಡ್ಡದು. ರೈತರ ಹಣ ತಿನ್ನುವ ಅಧಿಕಾರಿಗಳು ಉದ್ಧಾರ ಆಗುವುದಿಲ್ಲ. ರೈತರ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅದನ್ನು ಕೂಡಲೇ ಸರಿಪಡಿಸುವ ನಿಟ್ಟಿನಲ್ಲಿ ಮುಂದಿನ ವಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಇಲಾಖಾವಾರು ಅಧಿಕಾರಿಗಳ ಮೂಲಕ ಪ್ರತಿ ಹಳ್ಳಿಗಳಿಗೆ ತೆರಳಿ ರೈತರ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಅದನ್ನು ಬಗೆಹರಿಸುವರು ಎಂದರು.
ರೈತರಿಗೆ ಮೋಸ ಮಾಡಿ ಯಾವುದೇ ಸಾಧನೆ ಮಾಡುವ ಸಲುವಾಗಿ ಸೂರ್ಯನಗರ 4ನೇ ಹಂತದ ಕಾಮಗಾರಿ ಪ್ರಾರಂಭಿಸಿಲ್ಲ. ಹೌಸಿಂಗ್ ಬೋರ್ಡ್ ಅಧಿಕಾರಿಗಳು ಮಧ್ಯವರ್ತಿಗಳ ಮೂಲಕ ಬೆದರಿಕೆ ಹಾಕಿರುವ ದೂರುಗಳು ನಮ್ಮ ಗಮನಕ್ಕೂ ಬಂದಿವೆ. ಇದು ಸರಿಯಲ್ಲ ಎಂದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಬಹರಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಸ್ಥಳೀಯ ನಿವಾಸಿ ನವೀನ್ ಮಾತನಾಡಿ, ಾರಂ 53ರ ಸಮಸ್ಯೆಯಿಂದಾಗಿ ಬೊಮ್ಮಂಡಹಳ್ಳಿ, ಕೊನಸಂದ್ರ, ಇಂಡ್ಲವಾಡಿ, ಬಗ್ಗನದೊಡ್ಡಿ ಸೇರಿ ಹಲವಾರು ಕಡೆ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ ಒತ್ತಾಯ ಪೂರ್ವಕವಾಗಿ ಜಮೀನು ಬಿಡಿಸಿಕೊಂಡು ಯೋಜನೆಯಡಿ ಕೆಲಸ ಮಾಡುತ್ತಿದ್ದು, ಸಾಕಷ್ಟು ಕುಟುಂಬಗಳು ಸಂಕಷ್ಟ ಅನುಭವಿಸುವಂತಾಗಿದೆ ಎಂದರು.
ಇಂಡ್ಲವಾಡಿಯ ಬಸವರಾಜು ಮಾತನಾಡಿ, ಯೋಜನೆಗೆ ನಮ್ಮ ತಕರಾರು ಇಲ್ಲ. ಆದರೆ ಅಧಿಕಾರಿಗಳು ಪದೇಪದೆ ಹಣ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಯಣ್ಣ,
ಬೆಂಗಳೂರು ನಗರ ಜಿಲ್ಲಾ ಉಪವಿಭಾಗಾಧಿಕಾರಿ ಎ.ಆರ್.ರಘುನಂದನ್, ಡಿವೈಎಸ್ಪಿ ಮಲ್ಲೇಶ್, ವಿಶೇಷ ತಹಸೀಲ್ದಾರ್ ವೆಂಕಟಾಚಲಪತಿ, ಮುಖಂಡ ಅಚ್ಚುತ್ ರಾಜು, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾಗರಾಜು ಇತರರು ಇದ್ದರು.
ಅಧಿಕಾರಿಗಳ ವಿರುದ್ಧ ಆಕ್ರೋಶ: ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ರೈತರು ಹೌಸಿಂಗ್ ಬೋರ್ಡ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು, ನಮ್ಮ ಜಮೀನು ಪಡೆದು ಬೇರೆಯವರಿಗೆ ಮನೆ ಮಾರಾಟ ಮಾಡಲು ಮುಂದಾಗಿರುವುದು ಸರಿಯಲ್ಲ. ರೈತರಿಗೆ ರೌಡಿಗಳ ಮೂಲಕ ಬೆದರಿಕೆ ಹಾಕಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಲವರು ಸಚಿವರಿಗೆ ಮನವಿ ಮಾಡಿದರು.
ಯೋಜನೆ ಪರವಾಗಿದ್ದವರಿಗೆ ಮನ್ನಣೆ: ಸಭೆಯಲ್ಲಿ ಕೆಲವು ರೈತರು ಹಾಗೂ ಭೂಮಾಲೀಕರು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಆದರೆ ಯೋಜನೆ ಪರವಿರುವವರ ಮನವಿ ಹಾಗೂ ಅವುಗಳಿಗೆ ಸಂಬಂಧಿಸಿದ ಚರ್ಚೆಗಷ್ಟೇ ಪರಿಗಣನೆಗೆ ತೆಗೆದುಕೊಳ್ಳಲಾಯಿತು. ಈ ಬಗ್ಗೆ ಕೆಆರ್‌ಎಸ್ ಪಕ್ಷದ ಮುಖಂಡರು ಆಕ್ಷೇಪಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಎಲ್ಲವನ್ನೂ ತಿಳಿಗೊಳಿಸಿದರು.
ಶಾಸಕ, ಸಂಸದರು ಗೈರು: ಸಭೆಗೆ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಎಂ.ಕೃಷ್ಣಪ್ಪ ಗೈರಾಗಿದ್ದಾರೆ. ಅವರು ಉಪಸ್ಥಿತರಿದ್ದರೆ ರೈತರ ಇನ್ನಷ್ಟು ಸಮಸ್ಯೆಗಳನ್ನು ಹೇಳಿಕೊಳ್ಳಲು ಸಹಾಯವಾಗುತ್ತಿತ್ತು. ಅಧಿಕಾರಿಗಳು ಲಕ್ಷಾಂತರ ರೂಪಾಯಿ ಹಣವನ್ನು ರೈತರಿಂದ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇದನ್ನು ಯಾವ ರೈತ ಕೂಡ ನೇರವಾಗಿ ಹೇಳಲು ಸಾಧ್ಯವಿಲ್ಲದೆ ಭಯಪಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಐಸಿಎಂ ಕೃಷ್ಣಮೂರ್ತಿ ಅಲವತ್ತುಕೊಂಡರು.
ಕೆಲವು ರೈತರು ಅರ್ಧ ಎಕರೆ ಹಾಗೂ ಒಂದು ಎಕರೆ ಜಾಗ ಹೊಂದಿದ್ದಾರೆ. ಆದರೆ ಅವರಲ್ಲಿ ಸಂಪೂರ್ಣ ದಾಖಲೆ ಇರುವುದಿಲ್ಲ. ಅಂತಹ ರೈತರ ಜಮೀನುಗಳಿಗೆ ಸದ್ಯ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಡಿವೈಎಸ್‌ಪಿ ಹಾಗೂ ಅಧಿಕಾರಿಗಳನ್ನು ಒಳಗೊಂಡಂತೆ ತಂಡ ರಚಿಸಿ ಸಮಸ್ಯೆ ಬಗೆಹರಿಸಲಾಗುವುದು. ವಿ.ಸೋಮಣ್ಣ, ಸಚಿವ