ಚಿತ್ರದುರ್ಗ: ಸಹಕಾರ ಸಂಘ ಸ್ಥಾಪಿಸುವ ಮೂಲಕ ಬಡವರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಗಮನ ಹರಿಸುವಂತೆ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಶ್ರೀ ಜಗದ್ಗುರು ಪಂಚಾಚಾರ್ಯ(ಎಸ್‌ಜೆಪಿ)ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ಸಲಹೆ ನೀಡಿದರು.
ನಗರದ ಜೆಸಿಆರ್ ಬಡಾವಣೆಯಲ್ಲಿ ಸೋಮವಾರ ಶ್ರೀ ಜಗದ್ಗುರು ಪಂಚಾಚಾರ್ಯ ಪತ್ತಿನ ಸಹಕಾರ ಸಂಘದ ಪ್ರಾರಂಭೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬದುಕಿಗೆ ಪರಸ್ಪರರ ಸಹಕಾರದ ಅಗತ್ಯವಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ವಿತರಿಸಲು ಹಲವು ದಾಖಲೆಗಳನ್ನು ತೆಗೆದುಕೊಂಡು ಬನ್ನಿ ಎಂದು ಅಲೆದಾಡಿಸುತ್ತವೆ. ಸಹಕಾರಿ ಬ್ಯಾಂಕ್‌ಗಳು ಬಡವರ ಪಾಲಿಗೆ ವರದಾನವಾಗಿವೆ ಎಂದು ಅಭಿಪ್ರಾಯಪಟ್ಟರು.
ಸಹಕಾರ ಸಂಘಗಳ ಅಭಿವೃದ್ಧಿಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿವರ್ಗ ಸರಿಯಾಗಿ ಕೆಲಸ ವಿರ್ವಹಿಸಬೇಕು. ಆಡಳಿತ ಮಂಡಳಿ ಎಲ್ಲ ವಿಚಾರದಲ್ಲೂ ಮಧ್ಯ ಪ್ರವೇಶಿಸಬಾರದು ಎಂದರು.
ಸಹಕಾರ ಸಂಘದ ಮುಖ್ಯ ಪ್ರವರ್ತಕ ಕಲ್ಲೇಶಯ್ಯ, ವಿದ್ಯಾವಿಕಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿದರು.
ಜಂಗಮ ಸಮಾಜದ ಅಧ್ಯಕ್ಷ ಎಂ.ಟಿ. ಮಲ್ಲಿಕಾರ್ಜನಯ್ಯಸ್ವಾಮಿ, ಸಂಘದ ಕಾರ್ಯದರ್ಶಿ ಎಸ್. ಷಡಾಕ್ಷರಯ್ಯ, ವಕೀಲ ಕೆ.ಎನ್. ವಿಶ್ವನಾಥಯ್ಯ, ಡಾ. ಪ್ರಭುದೇವ್, ಬಿ. ವಿಜಯಕುಮಾರ್, ಶಶಿಧರ್‌ಬಾಬು, ಬಸವರಾಜ ಶಾಸ್ತ್ರಿ, ಲೀಲಾವತಿ, ಬಿ.ಎಂ. ಕರಿಬಸವಯ್ಯ, ಜಿ.ಎಂ. ವೀರೇಶ್, ಶರಣಯ್ಯ, ಶಿವನಗೌಡ್ರು ಮತ್ತಿತರರು ಇದ್ದರು.