ಜಿಲ್ಲೆ

ಬಡತನದಲ್ಲಿ ಬೆಳಕು ಕಂಡಿದ್ದ ಬಂಗಾರಪೇಟೆ ಯೋಧ ಸಾವು

ಬಂಗಾರಪೇಟೆ/ಕೋಲಾರ: ತಾಯಿ ಜೀತ ಮಾಡುವುದನ್ನು ತಪ್ಪಿಸಬೇಕು, ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಸ್ವಂತ ಮನೆ ನಿರ್ಮಾಣದ ನಂತರ ಮದುವೆ ಆಗಬೇಕೆಂದುಕೊಂಡಿದ್ದ ಬಂಗಾರಪೇಟೆ ತಾಲೂಕಿನ ಕಣಿಂಬೆಲೆ ಗ್ರಾಮದ ಯೋಧ ಕನಸು ಸಾಕಾರಗೊಳ್ಳುವ ಮುನ್ನವೇ ವಿಧಿವಶನಾಗಿರುವುದು ಕುಟುಂಬದಲ್ಲಿ ಆಘಾತವನ್ನುಂಟು ಮಾಡಿದೆ.

ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಶಿಕ್ಷಣ, ಬಂಗಾರಪೇಟೆಯ ಕೆಸಿ ರೆಡ್ಡಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ ಪ್ರಶಾಂತ್ (27) 2015ರಲ್ಲಿ ಮದ್ರಾಸ್ ಎಂಆರ್‌ಸಿ 17ನೇ ಬೆಟಾಲಿನ್‌ಗೆ ಸೇರಿ ದೇಶ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದರು.

ಊಟಿಯಲ್ಲಿ ಒಂದು ವರ್ಷ ತರಬೇತಿ ಪಡೆದು ಅಲ್ಲೇ 6 ತಿಂಗಳು ಸೇವೆ ಸಲ್ಲಿಸಿ ನಂತರ ಗುಜರಾತ್‌ನ ಕಚ್‌ಬುಚ್‌ಗೆ ವರ್ಗಾವಣೆಗೊಂಡು 2 ವರ್ಷ ಕೆಲಸ ನಿರ್ವಹಿಸಿದ ಬಳಿಕ ಜಮ್ಮು-ಕಾಶ್ಮೀರದ ರಜೋರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಪ್ರಶಾಂತ್ ನಿಧನದ ಮಾಹಿತಿಯನ್ನು ಸೇನಾಧಿಕಾರಿಗಳು ಮೃತರ ಸಂಬಂಧಿಕರಿಗೆ ತಿಳಿಸಿದ್ದು ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತದೇಹವನ್ನು ಸೇನೆ ಸಿಬ್ಬಂದಿ ಗುರುವಾರ ರಾತ್ರಿ ರವಾನಿಸಿದ್ದು ಫೆ.28ರಂದು ಮುಂಜಾನೆ ಗ್ರಾಮ ತಲುಪುವ ಸಾಧ್ಯತೆಗಳಿವೆ.

ಪ್ರಶಾಂತ್ ಮನೆಗೆ ಆಧಾರವಾಗಿದ್ದರು. ತಂದೆ ನಾರಾಯಣಸ್ವಾಮಿ ತೀರಿಕೊಂಡಿದ್ದು, ತಾಯಿ ಲಕ್ಷ್ಮಮ್ಮ ಹೊಲ ಗದ್ದೆಗಳಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅಣ್ಣ ತಮಿಳುನಾಡಿನ ಹೊಸೂರಿನ ಬಾಗಲೂರಿನಲ್ಲಿದ್ದಾರೆ. ತಂಗಿ ಗ್ರಾಮದಲ್ಲಿ ನೆಲೆಸಿದ್ದಾರೆ.

ಮೂರು ತಿಂಗಳ ಹಿಂದೆ ರಜೆ ಮೇಲೆ ಗ್ರಾಮಕ್ಕೆ ಬಂದಿದ್ದ ಪ್ರಶಾಂತ್ ಹಳೇಮನೆ ಕೆಡವಿ ಹೊಸ ಮನೆ ನಿರ್ಮಿಸಲು ಚಾಲನೆ ನೀಡಿ ಹೋಗಿದ್ದರು. ಪ್ರಸ್ತುತ ತಾಯಿ ಲಕ್ಷ್ಮಮ್ಮ ದೊಡ್ಡ ಮಗನ ಮನೆಗೆ ಹೋಗಿದ್ದಾರೆ. ಸಾವಿನ ಸುದ್ದಿಯಿಂದ ದಿಗ್ಭ್ರಮೆಗೊಂಡಿದ್ದು ಆಕ್ರಂಧನ ಮುಗಿಲು ಮುಟ್ಟಿದೆ.

ಶಂಕೆ: ಪ್ರಶಾಂತ್ ಅನಾರೋಗ್ಯದಿಂದ ಮೃತನಾಗಿರಬಹುದೆಂದು ಕೆಲವರು ಹೇಳುತ್ತಿದ್ದರೆ, ಗಡಿಯಲ್ಲಿ ಹುತಾತ್ಮನಾಗಿರಬಹುದೆಂದು ಗ್ರಾಮಸ್ಥರು ಶಂಕಿಸಿದ್ದಾರೆ.

ಪ್ರಶಾಂತ್ ಸಾವಿನ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಕಂದಾಯ ಇಲಾಖೆಯ ಆರ್‌ಐ ಒಬ್ಬರನ್ನು ಗ್ರಾಮಕ್ಕೆ ಕಳುಹಿಸಲಾಗಿ, ಮೃತನ ಕಡೆಯವರು ಅನಾರೋಗ್ಯದಿಂದ ಸತ್ತಿರಬಹುದೆಂದು ಶಂಕಿಸಿದ್ದಾರೆ. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ. ಚಂದ್ರಮೌಳೇಶ್ವರ, ತಹಸೀಲ್ದಾರ್, ಬಂಗಾರಪೇಟೆ ಪ್ರಶಾಂತ್ ನಮ್ಮೂರಿನ ಹೆಮ್ಮೆಯ ಪುತ್ರ. ಕಷ್ಟಪಟ್ಟು ಓದಿ ದೇಶ ಸೇವೆಗಾಗಿ ಸೇನೆ ಸೇರಿದ್ದ. ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಮನೆ ಕಟ್ಟಿದ ನಂತರ ಮದುವೆ ಎಂದು ಹೇಳಿದ್ದ. 3 ತಿಂಗಳ ಹಿಂದೆ ಊರಿಗೆ ಬಂದಿದ್ದಾಗ ಸ್ನೇಹಿತರೊಂದಿಗೆ ಭಾರತೀಯ ಸೇನೆಯ ಬಗ್ಗೆ ಅತ್ಯಂತ ಪ್ರೀತಿ ಮತ್ತು ಗೌರವದಿಂದ ಮಾತನಾಡಿದ್ದ. ಶ್ರೀನಿವಾಸ್, ಕಣಿಂಬೆಲೆ ಗ್ರಾಮ