ಮೈಸೂರು: ಜ್ಞಾನ ದಾಸೋಹ, ವಸತಿ ದಾಸೋಹ ನೀಡಿ ಬಡಜನರ ಭವಿಷ್ಯವನ್ನು ಉಜ್ವಲಗೊಳಿಸಿದ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರೊಬ್ಬ ಮಹಾದಾರ್ಶನಿಕರು ಎಂದು ಸಂಸ್ಕೃತಿ ಚಿಂತಕ ಶಂಕರ್ ದೇವನೂರ ಹೇಳಿದರು.
ಶರಣ ಸಾಹಿತ್ಯ ಪರಿಷತ್ ಮೈಸೂರು ನಗರ ಘಟಕದಿಂದ ಜೆ.ಪಿ.ನಗರದ ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 107ನೇ ಜಯಂತಿ, ಸಂಸ್ಥಾಪನಾ ದಿನಾಚರಣೆ, ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುದ್ಧ ವಿರೋಧಿ ನೀತಿ, ಶಾಂತಿಮಂತ್ರವನ್ನು ಜಗತ್ತಿಗೆ ಬೋಧಿಸಿದ ನಾಡು ಸಂಸ್ಕೃತಿಯನ್ನು ಪ್ರತಿಪಾದಿಸಿದ್ದು ಸುತ್ತೂರು ಪರಂಪರೆ. ಇದರ ಭಾಗವಾದ ರಾಜೇಂದ್ರಶ್ರೀಗಳು ಅರೆಹೊಟ್ಟೆ, ಹರಿದ ಅಂಗಿತೊಟ್ಟು ಬಂದ ಬಡವರ ಮಕ್ಕಳ ಒಡಲು ತುಂಬಿಸಿ, ಜ್ಞಾನದ ಅರಿವು ಮೂಡಿಸಿದರು. ಸುತ್ತೂರಿನ ಸುತ್ತಲಿನ ಜೈನ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿ ಧರ್ಮ ಸಮನ್ವಯತೆ ಅನುಸರಿಸಿದರು. ರಾಜೇಂದ್ರಶ್ರೀಗಳು ಜಾತಿ, ಮತ, ವರ್ಣ, ದೇಶ, ಭಾಷೆಯ ಭೇದವಿಲ್ಲದೆ ವಿದ್ಯೆ ಅರಿಸಿಬಂದ ಎಲ್ಲ ಬಡಮಕ್ಕಳಿಗೆ ಆಶ್ರಯ ನೀಡಿದರು ಎಂದರು.
ಸುತ್ತೂರುಮಠದ ಶಿವರಾತ್ರಿ ರಾಜೇಂದ್ರಶ್ರೀಗಳು ಇತರರ ಕಷ್ಟಕ್ಕಾಗಿ, ಸಂತೋಷಕ್ಕಾಗಿ ತಮ್ಮ ಬದುಕನ್ನು ಮುಡುಪಿಟ್ಟ ಹೃದಯ ವಂತರು. ಅವರ ಆದರ್ಶಪಥವೇ ನಮ್ಮ ಜ್ಯೋತಿರ್ಪಥವಾಗಬೇಕು. ಶ್ರೀಗಳು ದೈಹಿಕವಾಗಿ ಅಷ್ಟೇ ನಮ್ಮನ್ನು ಅಗಲಿದ್ದಾರೆ. ವಾಸ್ತವವಾಗಿ ನಮ್ಮ ಹೃನ್ಮನಗಳಲ್ಲಿ ಬದುಕಿದ್ದಾರೆ. ಅವರು ಚಿರಂತನರು. ಬದುಕಿದ್ದ ಕಾಲದಲ್ಲೇ ಅವರು ಲಕ್ಷಾಂತರ ಜನರ ಮನಸ್ಸು ಗೆದ್ದವರು. ಇಂದಿನ ಜೆಎಸ್‌ಎಸ್ ಸಂಸ್ಥೆ ಮತ್ತು ಮಹಾವಿದ್ಯಾಪೀಠದ ಹುಟ್ಟಿಗೆ, ಪ್ರಗತಿಗೆ ಭದ್ರ ಬುನಾದಿ ಹಾಕಿದವರು ಎಂದು ಸ್ಮರಿಸಿದರು.
ವಿದ್ಯಾಭ್ಯಾಸಕ್ಕೆಂದು ಮೈಸೂರಿಗೆ ಬಂದವರು ಇಲ್ಲಿ ವಿದ್ಯಾರ್ಥಿಗಳು ಪಡುತ್ತಿದ್ದ ಬವಣೆಯನ್ನು ನೋಡಿ, ನೊಂದು ತಮ್ಮ ವಿದ್ಯಾಭ್ಯಾಸ ಮೊಟಕಾದರೂ ಪರವಾಗಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ತಮ್ಮ ಕಡೆಯಿಂದ, ಮಠದ ಕಡೆಯಿಂದ ಏನಾದರೂ ಅನುಕೂಲ ಮಾಡ ಬೇಕೆಂದು 12ರ ಹರೆಯದಲ್ಲಿ ಪಟ್ಟಣತೊಟ್ಟರು. ಅಂದಿನ ಬ್ರಿಟಿಷರ ಆಡಳಿತ, ದಬ್ಬಾಳಿಕೆಯ ಸಂದರ್ಭದಲ್ಲಿ ಎಲ್ಲರೂ ವಿದ್ಯಾವಂತ ರಾಗಬೇಕು, ವಿದ್ಯೆಯೊಂದೇ ಎಲ್ಲ ಸಮಸ್ಯೆಗಳಿಗೆ ತಾರಕ ಮಂತ್ರವೆಂದು ಮನಗಂಡು ಕೇವಲ 12 ಮಕ್ಕಳಿಗೆ ಊಟದ ವ್ಯವಸ್ಥೆಯೊಂದಿಗೆ ಓದಲು ಅನುವು ಮಾಡಿಕೊಟ್ಟ ಶ್ರೀಗಳು. 1960ರ ಹೊತ್ತಿಗೆ ಸುತ್ತೂರುಮಠದಲ್ಲಿ 4 ಸಾವಿರ ವಿದ್ಯಾರ್ಥಿಗಳಿಗೆ ಜ್ಞಾನಾನ್ನ ದಾಸೋಹಕ್ಕೆ ಕಾರಣರಾದರು ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಡಿ.ಎಸ್.ಸದಾಶಿವಮೂರ್ತಿ ಮಾತನಾಡಿ, ಸ್ವಾತಂತ್ರೃ ಪೂರ್ವದಲ್ಲಿ ಕಿತ್ತುತಿನ್ನುವ ಬಡತನದ ಕಷ್ಟ ಕಾಲದಲ್ಲಿ ಭಿಕ್ಷೆಬೇಡಿ, ತಮ್ಮಲ್ಲಿದ್ದ ಬಂಗಾರದ ಕರಡಿಗೆ, ರುದ್ರಾಕ್ಷಿ ಮಾರಾಟ ಮಾಡಿ ಮಕ್ಕಳಿಗೆ ಉಣಬಡಿಸಿದ್ದರು. ಇಂತಹ ವಾಸ್ತವ ಸ್ಥಿತಿಯನ್ನು ಇಂದಿನ ಮಕ್ಕಳು ತಿಳಿದುಕೊಳ್ಳಬೇಕು ಎಂದರು.
ಸಮೂಹ ಶಕ್ತಿಯಿಂದ ಅವರು ವಿದ್ಯಾಸಂಸ್ಥೆಗಳನ್ನು ಕಟ್ಟಿದರು. 1986ರ ಹೊತ್ತಿಗೆ 170ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳನ್ನು ನಿರ್ಮಾಣ ಮಾಡಿದರು. ರಾಜೇಂದ್ರ ಶ್ರೀಗಳು ಈ ನಾಡು ಕಂಡ ಮಹಾಚೇತನ. ಇವರು ಹಬ್ಬಿಸಿದ ಜ್ಞಾನಜ್ಯೋತಿ ಇಂದು ವಿಶ್ವಡೆದೆಲ್ಲೆಡೆ ಹರಡಿದೆ. ಉಚಿತ ಪ್ರಸಾದ ನಿಲಯದೊಂದಿಗೆ ಆರಂಭವಾದ ಸಂಸ್ಥೆ ಇಂದು 350ಕ್ಕೂ ಹೆಚ್ಚಿನ ಶಿಕ್ಷಣಸಂಸ್ಥೆಗಳಾಗಿ ಬೆಳೆದು ಜಾತ್ಯತೀತವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ರೂಪುಗೊಂಡಿವೆ. ಇವುಗಳ ಸ್ಥಾಪನೆಯಲ್ಲಿ ಶ್ರೀಗಳ ದೂರದರ್ಶಿತ್ವ, ಅಂತಃಕರಣ ಮತ್ತು ಮಾತೃ ವಾತ್ಸಲ್ಯ ಇದೆ ಎಂದು ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅನ್ನು ಸ್ಥಾಪಿಸಿ ಶರಣ ಸಂಸ್ಕೃತಿ, ಸಾಹಿತ್ಯ, ಸಂಗೀತ, ನೃತ್ಯವನ್ನು ನಾಡಿಗೆ ಪಸರಿಸುವಂತೆ ಮಾಡಿದ ಮಹಾತ್ಮ ರಾಜೇಂದ್ರಶ್ರೀಗಳು ಎಂದರು.
ಕುಂದೂರುಮಠದ ಶ್ರೀಶರತ್‌ಚಂದ್ರಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪರಿಷತ್‌ನ ನಗರಾಧ್ಯಕ್ಷ ಮ.ಗು.ಸದಾನಂದಯ್ಯ, ಪ್ರಾಂಶು ಪಾಲೆ ಎಚ್.ಟಿ.ನಿರ್ಮಲಾ, ದತ್ತಿದಾನಿಯಾದ ಎಂ.ಎ.ನೀಲಾಂಬಿಕಾ ಇನ್ನಿತರರು ಇದ್ದರು