ಜಿಲ್ಲೆ

ಬಡ ವಿದ್ಯಾರ್ಥಿನಿ ಓದಿಗೆ 2.35 ಲಕ್ಷ ನೆರವು

ಔರಾದ್: ಎಸ್ಸೆಸ್ಸೆಲ್ಸಿಯಲ್ಲಿ ಶೇ.92.48 ಅಂಕ ಪಡೆದ ಗ್ರಾಮೀಣ ಬಡ ಪ್ರತಿಭೆ, ಯನಗುಂದಾ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಬಸವಜ್ಯೋತಿ ಮುಂದಿನ ಶಿಕ್ಷಣಕ್ಕೆ ಸಾರ್ವಜನಿಕ ವಲಯದಿಂದ ನೆರವು ಹರಿದುಬಂದಿದೆ.
ಪ್ರತಿಭಾವಂತೆ ಬಸವಜ್ಯೋತಿಗೆ ಪಾಲಕರಿಲ್ಲ. ಅಜ್ಜ-ಅಜ್ಜಿ ಆಶ್ರಯದಲ್ಲಿ ಕಡುಬಡತನದಲ್ಲಿ ಬೆಳೆದಿರುವ ಈಕೆಗೆ ಅಧ್ಯಯನ ಕಷ್ಟಕರವಾಗಿತ್ತು. ಈ ಕುರಿತು ಮೇ ೧೬ರಂದು ವಿಜಯವಾಣಿಯಲ್ಲಿ `ಪ್ರತಿಭಾವಂತ ಬಾಲೆಗೆ ಬೇಕಿದೆ ಆರ್ಥಿಕ ನೆರವು' ತಲೆಬರಹದಡಿ ವರದಿ ಪ್ರಕಟಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ದಾನಿಗಳಿಂದ ಇದುವರೆಗೆ 2,35,940 ರೂ. ನೆರವು ಬಂದಿದೆ.
ನಮ್ಮ ಶಾಲೆ ವಿದ್ಯಾರ್ಥಿನಿ ನೆರವಿಗೆ ಹಲವು ದಾನಿಗಳು ಸಹಾಯಹಸ್ತ ಚಾಚಿದ್ದು, ಅಧ್ಯಯನಕ್ಕೆ ಅನುವು ಮಾಡಿಕೊಟ್ಟಂತಾಗಿದೆ ಎಂದು ಮುಖ್ಯ ಗುರು ಶಾಮಸುಂದರ ಖಾನಾಪುರಕರ್ ಸಂತಸ ವ್ಯಕ್ತಪಡಿಸಿದ್ದಾರೆ.
ಬೀದರ್‌ನ ಜ್ಞಾನಸುಧಾ ವಿದ್ಯಾಲಯದಲ್ಲಿ ಪಿಯುಸಿ ವಿಜ್ಞಾನ ಅಧ್ಯಯನ ಮಾಡುತ್ತಿರುವ ಬಸವಜ್ಯೋತಿಗೆ ಕಾಲೇಜಿನ ಆಡಳಿತ ಮಂಡಳಿ ಕಾಲೇಜು ಮತ್ತು ಹಾಸ್ಟೆಲ್ ಶುಲ್ಕದಲ್ಲಿ ರಿಯಾಯಿತಿ ನೀಡಿದ್ದಾರೆ.
ಫಲ ನೀಡಿದ ಸಾಂಘಿಕ ಪ್ರಯತ್ನ: ವಿದ್ಯಾರ್ಥಿನಿ ನೆರವಿಗೆ ಆಕೆ ಕಲಿತ ಶಾಲೆಯ ಎಲ್ಲ ಸಿಬ್ಬಂದಿ ನೆರವಿಗೆ ನಿಂತಿದ್ದಾರೆ. ಅವರ ಸಾಂಘಿಕ ಪ್ರಯತ್ನದಿಂದ ಬಸವಜ್ಯೋತಿಯ ಭವಿಷ್ಯ ರೂಪುಗೊಳ್ಳುವಂತೆ ಆಗಿದೆ. ಶಿಕ್ಷಕರಾದ ಬಸವರಾಜ ಮಠಪತಿ, ಮಲ್ಲಿಕಾರ್ಜುನ ಟಂಕಸಾಲೆ, ಅನೀಲಕುಮಾರ ಮಾಟೆ, ಖರ‍್ರಮ್ ಗುಲಾಮ್, ಮುಸ್ತಫಾ ಆಜಾದ್, ಲಕ್ಷö್ಮಣರಡ್ಡಿ ಗಂಗಾಪುರೆ, ತೇಜಸ್ವಿ ಚಾಂದಕವಠೆ, ಉದಯಕುಮಾರ ಸೇರಿ ಎಲ್ಲರ ಪ್ರಯತ್ನಕ್ಕೆ ಎಸ್‌ಡಿಎಂಸಿ ಅಧ್ಯಕ್ಷ ಶಿವರಾಜ ಶೆಟಕಾರ್ ಧನ್ಯವಾದ ಹೇಳಿದ್ದಾರೆ.