ಕೊಪ್ಪಳ:ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಿರಲೆಂದು ಸರ್ಕಾರ ಹಾಸ್ಟೆಲ್ ನಿರ್ಮಿಸುತ್ತಿದೆ. ಅರ್ಹರು ಪ್ರವೇಶ ಪಡೆದು, ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.
ನಗರದಲ್ಲಿ ಸೋಮವಾರ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಶಿಕ್ಷಣ ರಂಗ ಅಭಿವೃದ್ಧಿಯಾಗುತ್ತಿದೆ. ಹಳ್ಳಿಗಳಿಂದ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಸದ್ಯ ಇರುವ ಹಾಸ್ಟೆಲ್‌ಗಳಲ್ಲಿ ಸ್ಥಳವಾಕಾಶ ಕೊರತೆಯಾಗುತ್ತಿದೆ. ಅದನ್ನು ಮನಗಂಡು ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಹೆಚ್ಚುವರಿ ಹಾಸ್ಟೆಲ್ ನಿರ್ಮಿಸಲಾಗತ್ತಿದೆ. ಸಿಂಪಿಲಿಂಗಣ್ಣ ರಸ್ತೆಗೆ ಹೊಂದಿಕೊಂಡು 6.05 ಕೋಟಿ ರೂ. ವೆಚ್ಚದಲ್ಲಿ ಬಾಲಕಿಯ ಹಾದ್ಟಲ್ ನಿರ್ಮಿಸಲಾಗುವುದು. ಇದರಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ. ವಿದ್ಯಾರಂಗದಲ್ಲಿ ಪೈಪೋಟಿ ಹೆಚ್ಚುತ್ತಿದೆ. ಬಡ ವಿದ್ಯಾರ್ಥಿಗಳು ಹಿಂದುಳಿಯದಿರಲೆಂದು ಸರ್ಕಾರ ವಸತಿ ನಿಲಯ ನಿರ್ಮಿಸುತ್ತಿದೆ. ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ಹಾಸ್ಟೆಲ್ ನಿರ್ಮಿಸಲಾಗುವುದು. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ನಗರ ಬ್ಲಾಕ್ ಅಧ್ಯಕ್ಷ ಎಂ.ಕಾಟನ್ ಪಾಷಾ, ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ವಿರುಪಾಕ್ಷಪ್ಪ ಮೋರನಾಳ, ಅಜಿಮುದ್ದೀನ್ ಅತ್ತಾರ, ಸಿದ್ದು ಮ್ಯಾಗೇರಿ, ಲತಾ ಚಿನ್ನೂರು, ಅಕ್ಬರ್ ಪಾಷಾ, ಪ್ರಮುಖರಾದ ಜ್ಯೋತಿ ಗೊಂಡಬಾಳ, ಅಶೋಕ ಗೋರಂಟ್ಲಿ, ರವಿ ಕುರಗೋಡ, ಮಂಜುನಾಥ ಗೊಂಡಬಾಳ, ಮೆಹಬೂಬ ಅರಗಂಜಿ ಇತರರಿದ್ದರು.