ಬೇಲೂರು ತಾಲೂಕಿನ ವೀರದೇವನಹಳ್ಳಿ ಶಾಲಾ ಮಕ್ಕಳಿಗೆ ಅವಿರತ ಸಂಸ್ಥೆಯಿಂದ ನೋಟ್ ಬುಕ್‌ಗಳನ್ನು ವಿತರಿಸಲಾಯಿತು. ಡಾ.ಶಾಲಿನಿ, ಸಿ.ಲಕ್ಷ್ಮಪ್ಪ, ಪುನೀತ್, ನಿರಂಜನ್, ಕಾರ್ತಿಕ್ ಇದ್ದರು. 
ಜಿಲ್ಲೆ

ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

ಬೇಲೂರು: ರಾಜ್ಯದ ಪ್ರತಿಷ್ಠಿತ ಅವಿರತ ಸಂಸ್ಥೆಯಿಂದ ಪ್ರತಿ ವರ್ಷದಂತೆ ಸಾಹಿತಿ ಹಾಗೂ ಹಗರೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಾಲಿನಿ ಹಾಗೂ ನಿವೃತ್ತ ಶಿಕ್ಷಕ ಲಕ್ಷ್ಮಪ್ಪ ಅವರ ನೇತೃತ್ವದಲ್ಲಿ ಶನಿವಾರ ಬೇಲೂರು ತಾಲೂಕಿನ ಹಿಂದುಳಿದ ಗ್ರಾಮಗಳ ಆರು ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸಲಾಯಿತು.

ಪಠ್ಯ ಪುಸ್ತಕಗಳನ್ನು ಮಕ್ಕಳಿಗಾಗಿ ಸರ್ಕಾರ ಉಚಿತವಾಗಿ ನೀಡುತ್ತದೆ. ಆದರೆ ಅವರು ಬರೆದುಕೊಳ್ಳಲು ನೋಟ್‌ಬುಕ್‌ಗಳು ಇರುವುದಿಲ್ಲ. ಎಷ್ಟೋ ಮಕ್ಕಳಿಗೆ ನೋಟ್‌ಬುಕ್‌ಗಳನ್ನು ತೆಗೆದುಕೊಳ್ಳುವುದಕ್ಕೆ ಕಷ್ಟದ ಪರಿಸ್ಥಿತಿ ಇದೆ. ಜತೆಗೆ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಬಹುತೇಕರು ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ ವಿದ್ಯಾವಂತರಾದ ನಾವು ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಅವಿರತ ಸಂಸ್ಥೆ 15 ವರ್ಷಗಳಿಂದ ನಿರಂತರವಾಗಿ ಈ ಸೇವೆ ಮಾಡುತ್ತಿದೆ. ಶಿವಪುರ ಕಾವಲು, ಬಸ್ತಿಹಳ್ಳಿ, ವೀರದೇವನಹಳ್ಳಿ, ಅಮ್ಮನ ಬ್ಯಾಡರಹಳ್ಳಿ, ಬಸವರಾಜಪುರ, ಬಸವರಾಜಪುರ ಕಾಲನಿ ಶಾಲೆಯಲ್ಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೋಟ್ ಬುಕ್‌ಗಳನ್ನು ವಿತರಿಸಲಾಗಿದೆ. ಮಕ್ಕಳು ಸಹ ಉತ್ತಮ ಶಿಕ್ಷಣ ಪಡೆದು ಮುಂದಿನ ದಿನಗಳಲ್ಲಿ ಅವರೂ ಇದೇ ರೀತಿ ಇತರ ಮಕ್ಕಳಿಗೆ ಸಹಕಾರ ನೀಡಲಿ ಎಂದು ಹಗರೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಾಲಿನಿ ಹೇಳಿದರು.

ನಿವೃತ್ತ ಶಿಕ್ಷಕ ಸಿ.ಲಕ್ಷ್ಮಪ್ಪ, ಪುನೀತ್, ಸಾಹಿತಿ ನಿರಂಜನ್, ಅವಿರತ ಸಂಸ್ಥೆಯ ಕಾರ್ತಿಕ್, ಶಾಲಾ ಶಿಕ್ಷಕರು ಮತ್ತು ಮಕ್ಕಳಿದ್ದರು.