ಜಿಲ್ಲೆ

ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆಗೆ ಆದ್ಯತೆ

ಚಿತ್ರದುರ್ಗ: ಗ್ರಾಮೀಣ ಬಡ ರೋಗಿಗಳಿಗೂ ಉತ್ತಮ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಗುಣಮಟ್ಟದ ಆಸ್ಪತ್ರೆ, ಸಿಬ್ಬಂದಿಗೆ ವಸತಿ ಗೃಹ ನಿರ್ಮಿಸಲಾಗುತ್ತಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ. ಚಂದ್ರಪ್ಪ ಹೇಳಿದರು.

ಹೊಳಲ್ಕೆರೆ ತಾಲೂಕು ಚಿಕ್ಕಜಾಜೂರು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ವೈದ್ಯರು, ದಾದಿಯರು ಮತ್ತು ಡಿ.ಗ್ರೂಫ್ ನೌಕರರ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ವೈದ್ಯರು ದಿನದ 24 ಗಂಟೆಯೂ ರೋಗಿಗಳಿಗೆ ಸಿಗುವಂತಿರಬೇಕು. ಅದಕ್ಕಾಗಿಯೇ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ. 6 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಪಟ್ಟಣದ ಕೆರೆ ಸಮೀಪ ದ್ವಿಪಥ ರಸ್ತೆಯಾಗಿದೆ. ಸಾಸಲು ವರತ್ತದಿಂದ ಹಿರೇಬೆನ್ನೂರು ಸರ್ಕಲ್‌ವರೆಗಿನ ರಸ್ತೆಗೆ ನೂರು ಕೋಟಿ ರೂ., ಬ್ರಿಡ್ಜ್‌ಗೆ ಒಂದು ಕೋಟಿ ರೂ., ಸಿ.ಸಿ. ರಸ್ತೆಗೆ 60 ಲಕ್ಷ ರೂ., ಭೂತಪ್ಪನ ಗುಡಿ ಬಳಿಯ ಫ್ಲೈಓವರ್‌ಗೆ 35 ಕೋಟಿ ರೂ. ಮಂಜೂರಾಗಿದೆ.

ಆರು ತಿಂಗಳೊಳಗೆ ತಾಲೂಕಿನ ಎಲ್ಲ ಕೆರೆ-ಕಟ್ಟೆಗಳಿಗೂ ನೀರು ತುಂಬಿಸಲಾಗುವುದು ಎಂದು ಭರವಸೆ ನೀಡಿದರು. ಕ್ಷೇತ್ರದ ಪ್ರತಿ ಮನೆಗೆ ವಾಣಿವಿಲಾಸ ಸಾಗರದಿಂದ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕಾಗಿ 367 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಅಧಿಕಾರ, ಅಂತಸ್ತು ಶಾಶ್ವತವಲ್ಲ. ನಾನು ಮಂತ್ರಿಯೂ ಅಲ್ಲ, ಜನರಿಗೆ ಒಳ್ಳೆಯದು ಮಾಡಬೇಕೆನ್ನುವ ಬದ್ಧತೆ ಹೊಂದಿರುವ ಶಾಸಕ ನಾನು. ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.

ಗುಂಜಿಗನೂರು ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ದಾಸಪ್ಪ, ಉಪಾಧ್ಯಕ್ಷ ನವೀನ್‌ಕುಮಾರ್, ಮಾಜಿ ಅಧ್ಯಕ್ಷ ಡಿ.ಸಿ. ಮೋಹನ್, ಸದಸ್ಯರಾದ ಪಿ.ಎಸ್. ಮೂರ್ತಿ, ಗಂಗಣ್ಣ, ಆನಂದಪ್ಪ, ಜಗದೀಶ್, ಗುರುಸ್ವಾಮಿ, ಗೋವಿಂದಪ್ಪ, ಓಂಕಾರಪ್ಪ, ಕಲೀಲ್, ರುದ್ರಣ್ಣ, ಡಾ. ಪ್ರದೀಪ್ ಇತರರು ಇದ್ದರು.